ಉಡುಪಿ ಬ್ರಹ್ಮಾವರ: ಅಕ್ಟೋಬರ್ -17-2026 swabhimaananews
ಕರಾವಳಿ ಹೈಕೋರ್ಟ್ ಪೀಠ ಹೋರಾಟ ಸಮಿತಿ ಉಡುಪಿ ಜಿಲ್ಲೆಯ ಕರೆಯ ಮೇರೆಗೆ ಬ್ರಹ್ಮಾವರ ತಾಲೂಕು ಹೋರಾಟ ಸಮಿತಿ ಹಾಗೂ ವಕೀಲರ ಸಂಘ ಆಯೋಜಿಸಿದ್ದ ಹಕ್ಕೊತ್ತಾಯ ಸಭೆಯಲ್ಲಿ ತಾಲೂಕಿನ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಭಾಗವಹಿಸಿ, ಕರಾವಳಿ ಹೈಕೋರ್ಟ್ ಪೀಠ ಸ್ಥಾಪನೆ ಶೀಘ್ರದಲ್ಲಿ ಆಗಲೇಬೇಕು, ಹಾಗೆಯೇ ಕರಾವಳಿಯ ಮಧ್ಯಭಾಗವಾದ ಉಡುಪಿ ಜಿಲ್ಲೆಯಲ್ಲಿ ಸ್ಥಾಪನೆಯಾದರೆ ಇಡೀ ಕರಾವಳಿಯ ಮೂರೂ ಜಿಲ್ಲೆಗಳ ಮತ್ತು ಸಮೀಪದ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಇನ್ನಿತರ
ಪ್ರದೇಶದ ಜನರಿಗೂ ಅನುಕೂಲವಾಗಲಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿತು.

ಸಭೆಯನ್ನುದ್ದೇಶಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಹೈಕೋರ್ಟ್ ಪೀಠ ಹೋರಾಟ ಸಮಿತಿ ಜಿಲ್ಲಾ ಸಂಚಾಲಕ ನ್ಯಾಯವಾದಿ ಪ್ರೇಮ್ ಪ್ರಸಾದ್ ಶೆಟ್ಟಿ,”ಈ ನಮ್ಮ ದಶಕಗಳ ಬೇಡಿಕೆ ಈಡೇರಿಕೆಗೆ ಇದು ಸಕಾಲ.

ನ್ಯಾ.ಜಸ್ವಂತ್ ಸಿಂಗ್ ಆಯೋಗದ ವರದಿ, ಕೇಂದ್ರ ಸರ್ಕಾರದ ನೀತಿ ಆಯೋಗದ ವರದಿ ಹಾಗೆಯೇ ರಾಷ್ಟ್ರೀಯ ಕಾನೂನು ಆಯೋಗದ ವರದಿ ಇವೆಲ್ಲವೂ ನ್ಯಾಯಾಂಗದಲ್ಲಿ ಆಗಬೇಕಾದ ಸುಧಾರಣೆಗಳನ್ನು ತಿಳಿಸಿವೆ.

ನಮ್ಮ ಈ ಹೈಕೋರ್ಟ್ ಪೀಠದ ಬೇಡಿಕೆಯು ಈ ಎಲ್ಲಾ ಆಯೋಗಗಳ ವರದಿಗಳಿಗೆ ಪೂರಕವಾಗಿದ್ದು, ಇದೀಗ ನಮ್ಮ ಹೋರಾಟ ಫಲವಾಗಿ ಪೀಠ ಸ್ಥಾಪನೆಯ ಸಾಧಕ ಬಾಧಕಗಳ ಕುರಿತು ಕರ್ನಾಟಕದ ಮುಖ್ಯ ನ್ಯಾಯಮೂರ್ತಿಗಳು ಕಳೆದ ತಿಂಗಳು ತ್ರಿಸದಸ್ಯ ನ್ಯಾಯಮೂರ್ತಿಗಳ ಸಮಿತಿಯನ್ನು ಅಧಿಸೂಚನೆ ಮೂಲಕ ನೇಮಿಸಿರುವುದನ್ನು ಸ್ವಾಗತಿಸುತ್ತಾ, ಸುಮಾರು ಸಾವಿರ ಕಿಲೋಮೀಟರ್ ನಷ್ಟು ಪ್ರಯಾಣಿಸಬೇಕಾದ ದೂರ, ದುಬಾರಿ ವೆಚ್ಚಗಳು, ಸಮಯ ಹಾಗೂ ಶ್ರಮವನ್ನು ವ್ಯರ್ಥ ಮಾಡಬೇಕಾದ ಇಂದಿನ ಪರಿಸ್ಥಿತಿಯು ಒಬ್ಬ ಜನಸಾಮಾನ್ಯನಿಗೆ ನ್ಯಾಯದ ಹಕ್ಕನ್ನು ಪಡೆಯಲು ಕಷ್ಟವಾಗಿದೆ.

ಸಂವಿಧಾನದ ವಿಧಿ 14 ಮತ್ತು 21 ಎಲ್ಲರಿಗೂ ನ್ಯಾಯ ಹಾಗೂ ನ್ಯಾಯದ ಹಕ್ಕು ಸಮಾನವಾಗಿ ಎಲ್ಲರಿಗೂ ಇರಬೇಕು ಎನ್ನುವ ಆಶಯವನ್ನು ಹೊಂದಿದ್ದು, ಇದನ್ನು ಸಾಕಾರಗೊಳಿಸಲು ಕರಾವಳಿ ಪೀಠ ಒಂದು ಪರಿಹಾರವಾಗಬಲ್ಲದು.

ಈ ಮೂಲಕ ರಾಜ್ಯದ ಎರಡನೇ ಅತೀ ಹೆಚ್ಚು ತೆರಿಗೆ ನೀಡುವ ಪ್ರದೇಶವಾದ ನಮ್ಮ ಕರಾವಳಿ ಭಾಗದ 50 ಲಕ್ಷಕ್ಕೂ ಹೆಚ್ಚಿನ ಜನಸಂಖ್ಯೆ ಬೆಂಗಳೂರಿನ ಮುಖ್ಯ ನ್ಯಾಯಪೀಠವನ್ನು ಅವಲಂಬಿಸುವುದನ್ನು ಇದು ತಪ್ಪಿಸುತ್ತದೆ. ಜನಸಾಮಾನ್ಯರ ಮನೆ ಬಾಗಿಲಿಗೆ ನ್ಯಾಯದಾನದ ವ್ಯವಸ್ಥೆಯನ್ನು ಕಲ್ಪಿಸುವುದು ನಮ್ಮ ಮುಖ್ಯ ಉದ್ದೇಶ. ಆದ್ದರಿಂದ ಈ ನಮ್ಮ ಹೋರಾಟ ಬಡವರ, ಹಿಂದುಳಿದ ವರ್ಗದವರ, ಜನಸಾಮಾನ್ಯರ ನ್ಯಾಯೋಚಿತ ಹೋರಾಟವಾಗಿದ್ದು, ನಾವೆಲ್ಲರೂ ಒಗ್ಗಟ್ಟಾಗಿ ಈ ನಮ್ಮ ಬೇಡಿಕೆ ಈಡೇರುವವರೆಗೂ ಸಂಘಟಿತರಾಗಿರಬೇಕು” ಎಂದು ತಿಳಿಸಿದರು.

ಸಭೆಯನ್ನುದ್ದೇಶಿಸಿ ಉದ್ಯಮಿ ಹಾಗೂ ರಾಜಕೀಯ ಮುಖಂಡ ಪ್ರಸಾದ್ ರಾಜ್ ಕಾಂಚನ್, ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಭುಜಂಗ ಶೆಟ್ಟಿ, ವಕೀಲರ ಸಂಘದ ಅಧ್ಯಕ್ಷರಾದ ಕಾಡೂರು ಪ್ರವೀಣ್ ಶೆಟ್ಟಿ, ಸಾಮಾಜಿಕ ಕಾರ್ಯಕರ್ತರಾದ ಶೇಖರ್ ಹಾವಂಜೆ, ಜ್ಞಾನ ವಸಂತ್ ಶೆಟ್ಟಿ ಮಾತನಾಡಿದರು.

ಸಭೆಯಲ್ಲಿ ಲಯನ್ಸ್ ಕ್ಲಬ್ ಅಧ್ಯಕ್ಷ ಸುಧೇಶ್ ಹೆಗ್ಡೆ, ರೋಟರಿ ಕ್ಲಬ್ ನ ಪ್ರಮೋದ್ ಶೆಟ್ಟಿ, ಜೈಕಿಶನ್, ಹಿರಿಯ ನಾಗರೀಕರ ವೇದಿಕೆಯ ಶೇಡಿಕೋಡ್ಲು ವಿಠ್ಠಲ್ ಶೆಟ್ಟಿ, ಸಮತಾ ಸೈನಿಕ ದಳದ ಮಹಿಳಾ ಅಧ್ಯಕ್ಷೆ ಜ್ಯೋತಿ ಶಿರಿಯಾರ, ಆರ್ ಟಿ ಐ ಕಾರ್ಯಕರ್ತ ಸದಾಶಿವ ಶೆಟ್ಟಿ, ಬಾರಕೂರು ಶಾಂತರಾಮ್ ಶೆಟ್ಟಿ, ಅಖಿಲ್ ಹೆಗ್ಡೆ, ದಲಿತ ಸoಘರ್ಷ ಸಮಿತಿಯ ಜಿಲ್ಲಾಧ್ಯಕ್ಷ ಚಂದ್ರ ಅಲ್ತಾರ್, ಹರೀಶ್ ಶೆಟ್ಟಿ ಚೇರ್ಕಾಡಿ, ಪೌರ್ಣಮಿ ಪ್ರೇಮ್, ಸುಜಾತ , ಪೃಥ್ವಿ, ಸುನಿತಾ, ಸತೀಶ್, ಸದಾಶಿವ , ವಿಜಯ್ ಪೂಜಾರಿ ಬಾರ್ಕೂರು,ಅನಿಲ್ ಫೆರ್ನಾಂಡಿಸ್, ಪ್ರಭಾಕರ ಮೆಸ್ತ,ಆಟೋ ಚಾಲಕರ ಸಂಘ, ಗೂಡ್ಸ್ ಆಟೋ ಮಾಲಕರ ಸಂಘ, ಸ್ತ್ರೀಶಕ್ತಿ ಹಾಗೂ ಸ್ವಸಹಾಯ ಸಂಘಗಳು, ಎಸ್ ಎಂ ಎಸ್ ಮತ್ತು ವಿಬಿಸಿಎಲ್ ಕಾಲೇಜು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಆಲ್ವಿನ್ ಅಂದ್ರಾದೆ ನಿರೂಪಿಸಿ, ಮಹೇಶ್ ತಡೆಕಲ್ಲು ವಂದಿಸಿದರು.
Swabhimaananews.
