14.2 C
New York
28 October 2026
Coastal

ಬಾರ್ಕೂರು ಬಿಲ್ಲವ ಸೇವಾ ಸಂಘದ ಆಡಳಿತ ಮಂಡಳಿ ರಚನೆ ವಿವಾದ: ನಕಲಿ ನಿರ್ಣಯ, ಪೋರ್ಜರಿ ಸಹಿ ಆರೋಪ..!

ಉಡುಪಿ: ಅಕ್ಟೋಬರ್ -28-2026- swabhimaananews .

ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಬಾರ್ಕೂರು ಶಿವಗಿರಿ ಬಿಲ್ಲವ ಸಂಘದ
ದಾಖಲೆಗಳ ಪರಿಶೀಲಿಸಿದ ಬಳಿಕ ಅಕ್ರಮದ ಆರೋಪ; ತನಿಖೆಗೆ ದೂರು, ಸಂಘದ ಆಡಳಿತದ ಬಗ್ಗೆ ಸಮಾಜಬಾಂಧವರಲ್ಲಿ ಆಕ್ರೋಶ
ಬಾರಕೂರು, ಉಡುಪಿ ಜಿಲ್ಲೆ: ಬಾರಕೂರು ಬಿಲ್ಲವ ಸೇವಾ ಸಂಘ (ರಿ), ಶಿವಗಿರಿ ಕ್ಷೇತ್ರದ ನೂತನ ಆಡಳಿತ ಮಂಡಳಿ ರಚನೆಗೆ ಸಂಬಂಧಿಸಿದಂತೆ ಗಂಭೀರ ವಿವಾದ ಉಂಟಾಗಿದ್ದು, ಹಿಂದಿನ ಆಡಳಿತ ಮಂಡಳಿಯ ಮುಂದುವರಿಕೆ, ಮಹಾಸಭೆಯ ನಿರ್ಣಯಗಳ ದಾಖಲೀಕರಣ ಹಾಗೂ ಸದಸ್ಯರ ಸಹಿ ಮತ್ತು ಭಾವಚಿತ್ರಗಳ ದುರ್ಬಳಕೆಯ ಆರೋಪಗಳು ಕೇಳಿಬಂದಿವೆ.

ಸಂಘದ ಆಡಳಿತ ಮಂಡಳಿ ರಚನೆಗೆ ಸಂಬಂಧಿಸಿದಂತೆ
ದಾಖಲೆಗಳನ್ನು ಪರಿಶೀಲಿಸಿದ ಬಳಿಕ ಹಲವು ಅಕ್ರಮಗಳು ನಡೆದಿರುವ ಶಂಕೆ ವ್ಯಕ್ತವಾಗಿದೆ ಎಂದು ದೂರುದಾರರು ತಿಳಿಸಿದ್ದಾರೆ.

ಮಹಾಸಭೆಯಲ್ಲಿ ಅಧ್ಯಕ್ಷರ ಆಯ್ಕೆ ಸಾಧ್ಯವಾಗಿರಲಿಲ್ಲ
ದೂರುದಾರರು ನೀಡಿರುವ ಮಾಹಿತಿಯ ಪ್ರಕಾರ, 09-08-2026ರಂದು ಸಂಘದ ನೂತನ ಆಡಳಿತ ಮಂಡಳಿಯ ಅಧ್ಯಕ್ಷರ ಆಯ್ಕೆಗಾಗಿ ಮಹಾಸಭೆ ಕರೆಯಲಾಗಿತ್ತು. ಈ ಸಭೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ನಾಲ್ಕೈದು ಮಂದಿ ಆಕಾಂಕ್ಷಿಗಳಿದ್ದು, ಆಯ್ಕೆ ವಿಚಾರದಲ್ಲಿ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿದ್ದವು. ಯಾವುದೇ ಅಭ್ಯರ್ಥಿಯ ಆಯ್ಕೆಗೆ ಒಮ್ಮತ ಮೂಡದ ಹಿನ್ನೆಲೆಯಲ್ಲಿ ಸಭೆಯಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.
ಆ ಸಂದರ್ಭದಲ್ಲಿ ಮುಂದಿನ ಆಡಳಿತ ಮಂಡಳಿಯನ್ನು ಚುನಾವಣೆ ನಡೆಸುವ ಮೂಲಕ ಆಯ್ಕೆ ಮಾಡಲಾಗುವುದು ಎಂದು ಹಿಂದಿನ ಅಧ್ಯಕ್ಷರಾದ ಸರ್ವೋತ್ತಮ ಪೂಜಾರಿ ತಿಳಿಸಿ ಸಭೆ ಮುಕ್ತಾಯಗೊಳಿಸಿದ್ದರು ಎಂಬುದು ದೂರುದಾರರ ಹೇಳಿಕೆ.

ಹಿಂದಿನ ಆಡಳಿತ ಮಂಡಳಿ ಮುಂದುವರಿದಿದ್ದು ಹೇಗೆ?
26-08-2026ರಂದು ಸಮಾಜದ ಹಿರಿಯರಾದ ಶಿವ ಪೂಜಾರಿ ಅವರ ನೇತೃತ್ವದಲ್ಲಿ ಸ್ಥಳೀಯ ಸಮಾಜದ ಕೆಲವು ಮುಖಂಡರು ಸಂಘದ ಆಜೀವ ಗೌರವಾಧ್ಯಕ್ಷರಾದ ಬಾಬು ಶಿವ ಪೂಜಾರಿ ಅವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿ, ಮುಂದಿನ ಆಡಳಿತ ಮಂಡಳಿಯ ರಚನೆ ಕುರಿತು ಚರ್ಚಿಸಿದ್ದರು ಎನ್ನಲಾಗಿದೆ.

ಆ ಸಂದರ್ಭದಲ್ಲಿ, ಹಿಂದಿನ ಅಧ್ಯಕ್ಷ ಸರ್ವೋತ್ತಮ ಪೂಜಾರಿ ನೇತೃತ್ವದ ಆಡಳಿತ ಮಂಡಳಿಯನ್ನು ಮುಂದಿನ ಎರಡು ವರ್ಷಗಳ ಕಾಲ ಮುಂದುವರಿಸಲು ವಕೀಲರ ಸಲಹೆ ಪಡೆದು ವ್ಯವಸ್ಥೆ ಮಾಡಲಾಗಿದೆ ಎಂದು ಬಾಬು ಶಿವ ಪೂಜಾರಿ ತಿಳಿಸಿದ್ದರೆಂದು ದೂರುದಾರರು ಹೇಳಿದ್ದಾರೆ.

ಆದರೆ, ಮಹಾಸಭೆಯಲ್ಲಿ ಈ ಕುರಿತು ಯಾವುದೇ ನಿರ್ಣಯ ಕೈಗೊಳ್ಳದಿರುವಾಗ ಹಾಗೂ ಚುನಾವಣೆ ನಡೆಸುವುದಾಗಿ ತಿಳಿಸಿದ್ದಾಗ, ಹಿಂದಿನ ಆಡಳಿತ ಮಂಡಳಿಯನ್ನು ಮುಂದುವರಿಸಲು ಯಾವ ನಿಯಮ ಅಥವಾ ಕಾನೂನು ಆಧಾರವನ್ನು ಅನುಸರಿಸಲಾಗಿದೆ ಎಂಬ ಪ್ರಶ್ನೆಯನ್ನು ಅವರು ಎತ್ತಿದ್ದಾರೆ

2,400 ಚದರ ಅಡಿ ಕಟ್ಟಡಕ್ಕೆ ಅನುಮೋದನೆ ನೀಡಿದ ನಿರ್ಣಯದ ಬಗ್ಗೆ ಆಕ್ಷೇಪ

ದಾಖಲೆಗಳನ್ನು ಪರಿಶೀಲಿಸಿದಾಗ, 09-08-2026ರ ಮಹಾಸಭೆಯಲ್ಲಿ 2,400 ಚದರ ಅಡಿ ವಿಸ್ತೀರ್ಣದ ವಾಣಿಜ್ಯ ಹಾಗೂ ಗ್ರಂಥಾಲಯ ಕಟ್ಟಡವನ್ನು ಸುಮಾರು 80 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲು ಸರ್ವಾನುಮತದ ಅನುಮೋದನೆ ನೀಡಲಾಗಿದೆ ಎಂಬ ನಿರ್ಣಯ ದಾಖಲಾಗಿರುವುದು ಕಂಡುಬಂದಿದೆ ಎಂದು ದೂರುದಾರರು ಆರೋಪಿಸಿದ್ದಾರೆ.

ಆದರೆ, ಅಂದು ನಡೆದ ಮಹಾಸಭೆಯಲ್ಲಿ ಈ ನಿರ್ಣಯಕ್ಕೆ ಸರ್ವಾನುಮತದ ಅನುಮೋದನೆ ದೊರೆತಿರಲಿಲ್ಲ. ಬದಲಾಗಿ, ಬ್ರಹ್ಮಶ್ರೀ ನಾರಾಯಣಗುರು ಮಂದಿರದ ಎದುರಿನಲ್ಲಿರುವ ವ್ಯಾಯಾಮ ಶಾಲೆಯನ್ನು ತೆರವುಗೊಳಿಸಿ ಎರಡು ಅಂತಸ್ತಿನ ಕಟ್ಟಡ ನಿರ್ಮಿಸುವ ಪ್ರಸ್ತಾವನೆಗೆ ಆಕ್ಷೇಪ ವ್ಯಕ್ತವಾಗಿತ್ತು ಎಂದು ಅವರು ತಿಳಿಸಿದ್ದಾರೆ.

ಮಂದಿರದಲ್ಲಿ ಮದುವೆ, ಗುರುಜಯಂತಿ, ವರಮಹಾಲಕ್ಷ್ಮಿ ವ್ರತ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯುವ ಸಂದರ್ಭದಲ್ಲಿ ಸಾವಿರಾರು ಜನರು ಸೇರುತ್ತಾರೆ. ಈಗಾಗಲೇ ವಾಹನ ನಿಲುಗಡೆಗೆ ಸ್ಥಳಾವಕಾಶದ ಕೊರತೆ ಇರುವುದರಿಂದ ಮತ್ತೊಂದು ಕಟ್ಟಡ ನಿರ್ಮಿಸಿದರೆ ಪಾರ್ಕಿಂಗ್ ಸಮಸ್ಯೆ ಹೆಚ್ಚಾಗಲಿದೆ ಹಾಗೂ ಮಂದಿರದ ಸೌಂದರ್ಯಕ್ಕೂ ಧಕ್ಕೆಯಾಗಲಿದೆ ಎಂದು ವಿಜಯ್ ಪೂಜಾರಿ, ರಕ್ಷಿತ್ ಪೂಜಾರಿ ಸೇರಿದಂತೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದರು ಎನ್ನಲಾಗಿದೆ.

ಈ ಹಿನ್ನೆಲೆಯಲ್ಲಿ ಕಟ್ಟಡ ನಿರ್ಮಾಣದ ನಿರ್ಣಯವನ್ನು ಮುಂದೂಡಲಾಗಿತ್ತು ಎಂಬುದು ದೂರುದಾರರ ವಾದ. ಹೀಗಿರುವಾಗ, ಅದೇ ಸಭೆಯಲ್ಲಿ ಸರ್ವಾನುಮತದ ಅನುಮೋದನೆ ದೊರೆತಿದೆ ಎಂದು ದಾಖಲೆಗಳಲ್ಲಿ ನಮೂದಿಸಿರುವುದು ಹೇಗೆ ಎಂಬ ಪ್ರಶ್ನೆಯನ್ನು ಅವರು ಎತ್ತಿದ್ದಾರೆ.

ಸದಸ್ಯರ ಸಹಿ ಮತ್ತು ಭಾವಚಿತ್ರ ದುರ್ಬಳಕೆಯ ಆರೋಪ
2026ರಿಂದ 2028ರವರೆಗಿನ ಅವಧಿಗೆ ಹೊಸ ಆಡಳಿತ ಮಂಡಳಿಯ ದಾಖಲೆಗಳನ್ನು ಸಲ್ಲಿಸಿರುವುದರ ಬಗ್ಗೆಯೂ ಆಕ್ಷೇಪ ವ್ಯಕ್ತವಾಗಿದೆ.
ಆಡಳಿತ ಮಂಡಳಿಯಲ್ಲಿ ಸೇರಿಸಿರುವ 34ಕ್ಕೂ ಹೆಚ್ಚು ಸದಸ್ಯರ ಒಪ್ಪಿಗೆ ಪಡೆಯದೆ ಅವರ ಹೆಸರುಗಳನ್ನು ಸೇರ್ಪಡೆ ಮಾಡಲಾಗಿದೆ, ಸಹಿಗಳನ್ನು ಪೋರ್ಜರಿ ಮಾಡಲಾಗಿದೆ ಹಾಗೂ ಭಾವಚಿತ್ರಗಳನ್ನು ದುರ್ಬಳಕೆ ಮಾಡಲಾಗಿದೆ ಎಂಬ ಆರೋಪಗಳು ಕೇಳಿಬಂದಿವೆ.

ಈ ಸಂಬಂಧ ಕೆಲವು ಸದಸ್ಯರು ಸಹಕಾರ ಸಂಘಗಳ ಉಪನಿಬಂಧಕರ ಕಚೇರಿ, ಉಡುಪಿ ಅವರಿಗೆ ಲಿಖಿತ ದೂರು ಸಲ್ಲಿಸಿದ್ದಾರೆ ಎನ್ನಲಾಗಿದೆ.
ಇದಲ್ಲದೆ, ಎಂಟು ಮಂದಿ ಬ್ರಹ್ಮಾವರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ ಎಂದು ದೂರುದಾರರು ತಿಳಿಸಿದ್ದಾರೆ.

10-10-2026ರಂದು ಅಕ್ರಮ ಆಡಳಿತ ಮಂಡಳಿ ರಚನೆಗೆ ಸಂಬಂಧಿಸಿದಂತೆ ಕ್ರಿಮಿನಲ್ ಪ್ರಕರಣ ದಾಖಲಿಸಿ ತನಿಖೆ ನಡೆಸುವಂತೆ ಕೋರಿ ಪೊಲೀಸ್ ಠಾಣೆಗೆ ದೂರು ಸಲ್ಲಿಸಲಾಗಿದೆ ಎಂಬ ಮಾಹಿತಿಯನ್ನೂ ಅವರು ನೀಡಿದ್ದಾರೆ.

ಈ ಆರೋಪಗಳ ಕುರಿತು ಸಂಬಂಧಪಟ್ಟ ಅಧಿಕಾರಿಗಳು ನಡೆಸುವ ಪರಿಶೀಲನೆ ಹಾಗೂ ತನಿಖೆಯಿಂದಲೇ ವಾಸ್ತವಾಂಶಗಳು ಸ್ಪಷ್ಟವಾಗಬೇಕಿದೆ.

ಒಂದೇ ಕುಟುಂಬದ ಏಳು ಮಂದಿ ಆಡಳಿತ ಮಂಡಳಿಯಲ್ಲಿ?
ಹೊಸ ಆಡಳಿತ ಮಂಡಳಿಯಲ್ಲಿ ಒಂದೇ ಮನೆಯ ಏಳು ಮಂದಿಗೆ ಆಜೀವ ಗೌರವಾಧ್ಯಕ್ಷ, ಗೌರವಾಧ್ಯಕ್ಷ ಹಾಗೂ ಇತರ ಪದಾಧಿಕಾರಿಗಳ ಸ್ಥಾನಗಳನ್ನು ನೀಡಲಾಗಿದೆ ಎಂಬ ಆಕ್ಷೇಪವೂ ವ್ಯಕ್ತವಾಗಿದೆ.
ಸಮಾಜದ ಸಂಘ-ಸಂಸ್ಥೆಗಳಲ್ಲಿ ಜವಾಬ್ದಾರಿಯುತ ಸ್ಥಾನಗಳನ್ನು ನೀಡುವಾಗ ಪಾರದರ್ಶಕತೆ, ಪ್ರಾಮಾಣಿಕತೆ, ಸದಸ್ಯರ ಒಪ್ಪಿಗೆ ಹಾಗೂ ಸಂಘದ ನಿಯಮಾವಳಿಗಳಿಗೆ ಆದ್ಯತೆ ನೀಡಬೇಕು.

ಸಮಾಜದ ಹಿತಾಸಕ್ತಿಯನ್ನು ಪ್ರತಿನಿಧಿಸುವ ಸಂಘದ ಆಡಳಿತದಲ್ಲಿ ಕುಟುಂಬದ ಪ್ರಭಾವಕ್ಕಿಂತ ಸಾಮೂಹಿಕ ಹಿತಾಸಕ್ತಿ ಮುಖ್ಯವಾಗಿರಬೇಕು ಎಂಬ ಅಭಿಪ್ರಾಯವನ್ನು ದೂರುದಾರರು ವ್ಯಕ್ತಪಡಿಸಿದ್ದಾರೆ.
ಚುನಾವಣೆ ನಡೆಸುವ ಬದಲು ಆಡಳಿತ ಮಂಡಳಿ ರಚನೆ ಏಕೆ?
ಸಾಮಾನ್ಯವಾಗಿ ಸಂಘ-ಸಂಸ್ಥೆಗಳಲ್ಲಿ ಆಡಳಿತ ಮಂಡಳಿ ಆಯ್ಕೆ ಸಂದರ್ಭದಲ್ಲಿ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗುವುದು ಸಹಜ.

ಆದರೆ, ಅಂತಹ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಲು ಸಂಘದ ನಿಯಮಾವಳಿ ಮತ್ತು ಪ್ರಜಾಸತ್ತಾತ್ಮಕ ವಿಧಾನಗಳನ್ನು ಅನುಸರಿಸಬೇಕು ಎಂಬುದು ಸಮಾಜದ ಸದಸ್ಯರ ಅಭಿಪ್ರಾಯವಾಗಿದೆ.

09-08-2026ರ ಮಹಾಸಭೆಯಲ್ಲಿ ಚುನಾವಣೆ ನಡೆಸಿ ಆಡಳಿತ ಮಂಡಳಿ ರಚಿಸುವುದಾಗಿ ತಿಳಿಸಿದ್ದರೂ, ನಂತರ ಚುನಾವಣಾ ದಿನಾಂಕ ನಿಗದಿಪಡಿಸದೆ ಹಿಂದಿನ ಅಧ್ಯಕ್ಷರೇ ಸಂಘದ ಬ್ಯಾಂಕ್ ಖಾತೆಯಿಂದ ಹಣ ಹಿಂಪಡೆಯುತ್ತಿರುವುದು ಕಂಡುಬಂದಿದೆ ಎಂದು ದೂರುದಾರರು ಆರೋಪಿಸಿದ್ದಾರೆ.

ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಸಂಘದ ಆಡಳಿತ ಮಂಡಳಿ ರಚನೆಗೆ ಸಂಬಂಧಿಸಿದ ದಾಖಲೆಗಳ ಸತ್ಯಾಸತ್ಯತೆಯನ್ನು ಪರಿಶೀಲಿಸಬೇಕು, ಮಹಾಸಭೆಯ ಮೂಲ ಹಾಜರಾತಿ ಪುಸ್ತಕ ಮತ್ತು ನಿರ್ಣಯ ಪುಸ್ತಕವನ್ನು ಪರಿಶೀಲಿಸಬೇಕು, ಆರೋಪಿತ ಸಹಿಗಳ ದೃಢೀಕರಣ ನಡೆಸಬೇಕು ಹಾಗೂ ಸಂಘದ ನಿಯಮಾವಳಿ ಮತ್ತು ಅನ್ವಯಿಸುವ ಕಾನೂನಿನ ಪ್ರಕಾರ ಮುಂದಿನ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ಕೇಳಿಬಂದಿದೆ.
ಸಮಾಜಕ್ಕೆ ಯಾವ ಸಂದೇಶ ನೀಡುತ್ತಿದ್ದೇವೆ?
ಸಮಾಜದ ಅಭಿವೃದ್ಧಿ, ಶಿಕ್ಷಣ, ಸಂಘಟನೆ ಮತ್ತು ಹಕ್ಕುಗಳ ರಕ್ಷಣೆಗಾಗಿ ಸ್ಥಾಪನೆಯಾಗುವ ಸಂಘ-ಸಂಸ್ಥೆಗಳು ಪಾರದರ್ಶಕವಾಗಿ ಕಾರ್ಯನಿರ್ವಹಿಸುವುದು ಅತ್ಯಗತ್ಯ.

ಸಾರ್ವಜನಿಕ ವೇದಿಕೆಗಳಲ್ಲಿ ಸಮಾಜದ ಏಕತೆ, ಪ್ರಾಮಾಣಿಕತೆ ಮತ್ತು ನೈತಿಕತೆಯ ಬಗ್ಗೆ ಮಾತನಾಡುವವರು ಸಂಘದ ಆಡಳಿತದಲ್ಲಿಯೂ ಅದೇ ಮೌಲ್ಯಗಳನ್ನು ಪಾಲಿಸಬೇಕಾಗಿದೆ ಎಂಬ ಪ್ರಶ್ನೆಯನ್ನು ಸಮಾಜಬಾಂಧವರು ಮುಂದಿಟ್ಟಿದ್ದಾರೆ.
ಬಾರಕೂರು ಶ್ರೀ ಬಿಲ್ಲವ ಸೇವಾ ಸಂಘದ ಆಡಳಿತ ಮಂಡಳಿ ರಚನೆಗೆ ಸಂಬಂಧಿಸಿದ ವಿವಾದವು ಸಮಾಜದ ಗೌರವ ಮತ್ತು ಸಂಘದ ವಿಶ್ವಾಸಾರ್ಹತೆಗೆ ಧಕ್ಕೆ ಉಂಟುಮಾಡದಂತೆ, ಸಂಬಂಧಪಟ್ಟ ಅಧಿಕಾರಿಗಳು ನಿಷ್ಪಕ್ಷಪಾತವಾಗಿ ಪರಿಶೀಲನೆ ನಡೆಸಿ ಸತ್ಯಾಸತ್ಯತೆ ಬಹಿರಂಗಪಡಿಸಬೇಕು ಎಂಬುದು ದೂರುದಾರರ ಒತ್ತಾಯವಾಗಿದೆ.

Swabhimaananews

Related posts

ಬೋಧಿಸತ್ವ ಬುದ್ಧ ಫೌಂಡೇಶನ್ ಉಡುಪಿ ಜಿಲ್ಲೆ,ಬೋಧಿಸತ ಬುದ್ಧ ವಿಹಾರ.ಹಾವಂಜೆ, ಕದಸಂಸ ಭೀಮವಾದ (ರಿ) ಉಡುಪಿ ಜಿಲ್ಲೆ ಇವರ ಜಂಟಿ ಸಹಯೋಗದಲ್ಲಿ ನಡೆದ ವಿಧ್ಯಾರ್ಥಿಗಳಿಗೆ ಬಾಬಾಸಾಹೇಬರ ಕುರಿತ ಸ್ಪರ್ಧೆಗಳು

Swabhimana News Desk

ಬೋಧಿಸತ್ವ ಬುದ್ಧವಿಹಾರ. ಹಾವಂಜೆಯಲ್ಲಿ ಧಮ್ಮಚಕ್ಕ ಪವತ್ತನ ದಿನಾಚರಣೆ.

Swabhimana News Desk

ಉಡುಪಿಯಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ಬ್ರಹ್ಮಾವರ ತಾಲೂಕು ಹೋರಾಟ ಸಮಿತಿ ಬೆಂಬಲ: ಅಕ್ಟೋಬರ್ 17ರಂದು ಬ್ರಹ್ಮಾವರದಲ್ಲಿ ಬೃಹತ್ ಹಕ್ಕೊತ್ತಾಯ ಸಭೆ

Swabhimana News Desk

Leave a Comment