21 C
New York
15 October 2026
Coastal

ಹಾವಂಜೆಯ ಬೋಧಿಸತ್ವ ಬುದ್ಧ ವಿಹಾರದಲ್ಲಿ ಬಾಬಾಸಾಹೇಬ್ ಅಂಬೇಡ್ಕರ್ ರವರ ಧಮ್ಮ ದೀಕ್ಷಾ ದಿನಾಚರಣೆ.

ಸಮಾನತೆ, ಕರುಣೆ ಮತ್ತು ಧಮ್ಮ ಮಾರ್ಗದಲ್ಲಿ ಮುನ್ನಡೆಯಲು ಗಣ್ಯರ ಕರೆ.

ಉಡುಪಿ ಹಾವಂಜೆ:14-10-2026 swabhimaananews ಶೋಷಣೆ, ತಾರತಮ್ಯ ಮತ್ತು ಅಸಮಾನತೆಗಳಿಂದ ಮುಕ್ತವಾದ ಸಮ ಸಮಾಜದ ನಿರ್ಮಾಣಕ್ಕೆ ಬುದ್ಧರ ಧಮ್ಮ ಮಾರ್ಗ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರ ವಿಚಾರಧಾರೆಗಳು ದಾರಿದೀಪವಾಗಬೇಕು ಎಂದು ಹಾವಂಜೆಯ ಬೋಧಿಸತ್ವ ಬುದ್ಧ ವಿಹಾರದಲ್ಲಿ ನಡೆದ ಧಮ್ಮ ದೀಕ್ಷಾ ದಿನಾಚರಣೆಯಲ್ಲಿ ಗಣ್ಯರು ಕರೆ ನೀಡಿದರು.
ದಿನಾಂಕ :-14/10/2026 ರಂದು ಬೋಧಿಸತ್ವ ಬುದ್ಧ ಫೌಂಡೇಶನ್ (ರಿ) ಉಡುಪಿ ಜಿಲ್ಲೆ ಮತ್ತು ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ) ಅಂಬೇಡ್ಕರ್ ಮಾರ್ಗ ಇವರ ವತಿಯಿಂದ ಬೋಧಿಸತ್ವ ಬುದ್ಧ ವಿಹಾರ ಹಾವಂಜೆಯಲ್ಲಿ ಹಿರಿಯ ಧಮ್ಮಾಚಾರಿಗಳಾದ ಎಸ್. ಆರ್. ಲಕ್ಷ್ಮಣ್ ರವರ ನೇತೃತ್ವದಲ್ಲಿ *ಬುದ್ಧ ವಂದನೆ, ಧಮ್ಮ ವಂದನೆ, ಸಂಘ ವಂದನೆ, ಧ್ಯಾನ, ಮೈತ್ರಿ ಧ್ಯಾನದ


ನಂತರ ಈ ಒಂದು ಅರ್ಥಪೂರ್ಣವಾದ ಕಾರ್ಯಕ್ರಮಕ್ಕೆ ಆಗಮಿಸಿದಂತಹ ಎಲ್ಲಾ ಮುಖ್ಯ ಅತಿಥಿಗಳು ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮೇಣದ ಬತ್ತಿಯ ಬೆಳಕನ್ನು ಬೆಳಗಿಸುವುದರ ಮೂಲಕ ಉದ್ಘಾಟಸಿ ಸಭಾ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು. ಸಭಾ ಕಾರ್ಯಕ್ರಮದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಬೌದ್ಧ ಮಹಾ ಸಭಾ ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧ್ಯಕ್ಷರಾದ ಎಂ.ವಿ. ಪದ್ಮನಾಭ ಮಾತನಾಡಿ, ಕರ್ನಾಟಕದಲ್ಲಿ ಧಮ್ಮವನ್ನು ಅನುಸರಿಸುವವರ ಸಂಖ್ಯೆ ಹೆಚ್ಚಾಗಬೇಕಿದೆ ಎಂದು ಅಭಿಪ್ರಾಯಪಟ್ಟರು. ದಕ್ಷಿಣ ಕನ್ನಡ ಜಿಲ್ಲೆಯ ಇತಿಹಾಸದಲ್ಲೇ ಮೊದಲ ಬಾರಿಗೆ ಬೌದ್ಧ ಸಂಸ್ಕಾರದ ಪ್ರಕಾರ ತಾವು ವಿವಾಹವಾಗಿರುವುದಾಗಿ ತಿಳಿಸಿದ ಅವರು, ಮನಸ್ಸನ್ನು ಶುದ್ಧವಾಗಿಟ್ಟುಕೊಂಡು ಪರಸ್ಪರ ಗೌರವದಿಂದ ಬದುಕುವ ಮೂಲಕ ಬೌದ್ಧ ಧರ್ಮವನ್ನು ಇನ್ನಷ್ಟು ಎತ್ತರಕ್ಕೆ ಬೆಳೆಸೋಣ ಎಂದರು. ಮುಖ್ಯ ಅತಿಥಿ ಹಿರಿಯ ಬೌದ್ಧ ಧಮ್ಮಾಚಾರಿಗಳಾದ ಎಸ್. ಆರ್. ಲಕ್ಷ್ಮಣ್ ರವರು ತಮ್ಮ ಪ್ರಾಸ್ತವಿಕ ನುಡಿಯಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರು ತಮ್ಮ ಲಕ್ಷಾಂತರ ಅನುಯಾಯಿಗಳೊಂದಿಗೆ ಬೌದ್ಧ ಧಮ್ಮದ ದೀಕ್ಷೆ ಪಡೆದ ಐತಿಹಾಸಿಕ ಘಟನೆಯನ್ನು ಸ್ಮರಿಸಿದರು. ನಾಗಪುರದ ಇತಿಹಾಸ ಮತ್ತು ನಾಗ ಸಮುದಾಯದ ಬೌದ್ಧ ಪರಂಪರೆಯನ್ನು ಉಲ್ಲೇಖಿಸಿದ ಅವರು, ಧರ್ಮಾಂತರದ ಕುರಿತು ಪ್ರಶ್ನಿಸಿದ ಪತ್ರಕರ್ತರಿಗೆ ಅಂಬೇಡ್ಕರ್ ಅವರು “ನಾನು ಧರ್ಮಾಂತರವಾಗುತ್ತಿಲ್ಲ; ಈ ನೆಲದ ಮೂಲ ಧರ್ಮಕ್ಕೆ ಮರಳುತ್ತಿದ್ದೇನೆ” ಎಂಬ ಅರ್ಥದ ಮಾತುಗಳನ್ನು ಹೇಳಿದ್ದಾಗಿ ತಿಳಿಸಿದರು. ಮತ್ತೋರ್ವ ಮುಖ್ಯ ಅತಿಥಿಗಳಾದ ಆಯುಷ್ಮಾನ್ ದೇವಪ್ಪ ಬೌದ್ಧ್ ಮಾತನಾಡಿ ಧಮ್ಮ ದೀಕ್ಷೆ ಮೂಲನಿವಾಸಿಗಳ ಬದುಕಿನಲ್ಲಿ ಮಹತ್ವದ ತಿರುವು, ಧಮ್ಮ ದೀಕ್ಷೆಯು ಮೂಲನಿವಾಸಿಗಳ ಬದುಕಿನಲ್ಲಿ ಮಹತ್ವದ ಬದಲಾವಣೆಗೆ ದಾರಿ ಮಾಡಿಕೊಟ್ಟ ಪವಿತ್ರ ದಿನವಾಗಿದೆ ಎಂದರು.
“ಅಸಮಾನತೆಗಳಿಂದ ಕೂಡಿದ ವ್ಯವಸ್ಥೆಯಲ್ಲಿ ಸಮಾಜ ಸುಧಾರಣೆ ಸಾಧ್ಯವಿಲ್ಲ ಎಂಬುದನ್ನು ಅರಿತ ಡಾ. ಬಿ.ಆರ್. ಅಂಬೇಡ್ಕರ್ ಅವರು ಬೌದ್ಧ ಧಮ್ಮವನ್ನು ಸ್ವೀಕರಿಸಿ ಸಮಾನತೆಯ ಸಂದೇಶ ಸಾರಿದರು. ದಲಿತ ಸಂಘರ್ಷ ಸಮಿತಿಯ ಮೂಲಕ ನಮಗೆ ಬುದ್ಧರ ವಿಚಾರಗಳು ಪರಿಚಯವಾದವು. 2003ರಲ್ಲಿ ಸಕಲೇಶಪುರದಲ್ಲಿ ಪೂಜ್ಯ ಆನಂದ ಭಂತೇಜಿ ಅವರಿಂದ ಧಮ್ಮ ದೀಕ್ಷೆ ಪಡೆದೆವು. ಅಂದಿನಿಂದ ಇಂದಿನವರೆಗೂ ಧಮ್ಮ ಪಾಲನೆ ಮಾಡಿಕೊಂಡು ಬರುತ್ತಿದ್ದೇವೆ,” ಎಂದು ತಮ್ಮ ಅನುಭವ ಹಂಚಿಕೊಂಡರು.
ನಮ್ಮಲ್ಲಿರುವ ದುರ್ಗುಣಗಳನ್ನು ತೊರೆದು ಸದ್ಗುಣಗಳನ್ನು ಬೆಳೆಸಿಕೊಳ್ಳಬೇಕು. ದೇಶದಲ್ಲಿ ಪ್ರತಿಯೊಬ್ಬರೂ ಸಮಾನತೆ, ಸುಖ ಮತ್ತು ಗೌರವದಿಂದ ಬದುಕುವ ವಾತಾವರಣ ನಿರ್ಮಿಸಬೇಕು ಎಂದು ಹೇಳಿದರು.


ಮುಖ್ಯ ಅತಿಥಿಗಳಾಗಿ ಆಗಮಿಸಿದಂತಹ ಕಿರುಚಿತ್ರ ನಿರ್ಮಾಪಕರು, ಸಂಗೀತ ನಿರ್ದೇಶಕರಾದ ದಿನೇಶ್ ಕೊಡವೂರು ರವರು ಸಭೆಯನ್ನು ಉದ್ದೇಶಿಸಿ ಮಾತನಾಡಿ ಬುದ್ಧರು ತಮ್ಮ ಜ್ಞಾನಸಾಧನೆಯ ಮೂಲಕ ದುಃಖದ ಸ್ವರೂಪ, ದುಃಖದ ಕಾರಣ, ದುಃಖ ನಿವಾರಣೆಯ ಸಾಧ್ಯತೆ ಮತ್ತು ದುಃಖ ನಿವಾರಣೆಯ ಮಾರ್ಗವನ್ನು ಜಗತ್ತಿಗೆ ತಿಳಿಸಿಕೊಟ್ಟ ಮಹಾನ್ ಜ್ಞಾನಿ ಎಂದು ಬಣ್ಣಿಸಿದರು. ಬುದ್ಧರ ಧಮ್ಮ ಮಾರ್ಗವು ಸಕಲ ಜೀವಿಗಳಿಗೂ ಶಾಂತಿ ಮತ್ತು ನೆಮ್ಮದಿಯ ದಾರಿಯಾಗಿದೆ ಎಂದರು.ಮತ್ತೋರ್ವ ಅತಿಥಿ ಭಾಸ್ಕರ್ ಕವತ್ತಾರು ರವರು ಮಾತನಾಡಿ ಡಾ. ಬಿ.ಆರ್. ಅಂಬೇಡ್ಕರ್ ಅವರು ಜಾತಿ ವ್ಯವಸ್ಥೆ ಮತ್ತು ಸಾಮಾಜಿಕ ಅಸಮಾನತೆಗಳ ವಿರುದ್ಧ ಹೋರಾಡಿ, ಬೌದ್ಧ ಧಮ್ಮವನ್ನು ಸ್ವೀಕರಿಸುವ ಮೂಲಕ ಸಮಾನತೆಯ ಸಂದೇಶವನ್ನು ಸಾರಿದರು. 1956ರ ಅಕ್ಟೋಬರ್ 14ರಂದು ನಾಗಪುರದ ದೀಕ್ಷಾಭೂಮಿಯಲ್ಲಿ ಭಂತೇ ಚಂದ್ರಮಣಿ ಅವರಿಂದ ಅಂಬೇಡ್ಕರ್ ಅವರು ತಮ್ಮ ಲಕ್ಷಾಂತರ ಅನುಯಾಯಿಗಳೊಂದಿಗೆ ಬೌದ್ಧ ಧಮ್ಮದ ದೀಕ್ಷೆ ಪಡೆದದ್ದು ಐತಿಹಾಸಿಕ ಘಟನೆಯಾಗಿದೆ. ಧಮ್ಮ ದೀಕ್ಷಾ ದಿನದ ಮಹತ್ವವನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕು ಎಂದು ಹೇಳಿದರು.ಮತ್ತೋರ್ವ ಮುಖ್ಯ ಅತಿಥಿ ಅನುಷಾರವರು ಮಾತನಾಡಿ ಹಾವಂಜೆಯ ಬೋಧಿಸತ್ವ ಬುದ್ಧ ವಿಹಾರದಲ್ಲಿ ನಿರಂತರವಾಗಿ ನಡೆಯುತ್ತಿರುವ ಬುದ್ಧ ವಂದನೆ, ಧ್ಯಾನ ಮತ್ತು ಧಮ್ಮ ಪ್ರವಚನಗಳಂತಹ ಕಾರ್ಯಗಳು ಶ್ಲಾಘನೀಯವಾಗಿವೆ. ಗೃಹಸ್ಥರು ಪಂಚಶೀಲಗಳನ್ನು ಪಾಲಿಸುವ ಮೂಲಕ ಉತ್ತಮ ಬದುಕು ರೂಪಿಸಿಕೊಳ್ಳಬೇಕು. ನಾವು ಮಾಡುವ ಪುಣ್ಯ ಕಾರ್ಯಗಳು ಜೀವನದಲ್ಲಿ ಸತ್ಕರ್ಮಗಳಾಗಿ ಉಳಿಯುತ್ತವೆ. ಆಸಕ್ತಿ, ಅಂಟಿಕೊಳ್ಳುವಿಕೆ ಮತ್ತು ತೃಷೆಯಿಂದ ಮುಕ್ತರಾಗುವ ಮೂಲಕ ದುಃಖ ನಿವಾರಣೆಯ ಮಾರ್ಗದಲ್ಲಿ ಸಾಗಬೇಕು ಎಂದು ತಿಳಿಸಿದರು. ಸಾಮ್ರಾಟ್ ಅಶೋಕನ ಬೌದ್ಧ ಧಮ್ಮದ ಪ್ರಚಾರ ಕಾರ್ಯಗಳನ್ನು ಸ್ಮರಿಸಿ, ಎಲ್ಲರೂ ಧಮ್ಮ ಪಾಲನೆಗೆ ಮುಂದಾಗಬೇಕು ಎಂದು ಕರೆ ನೀಡಿದರು. ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ವಹಿಸಿದ್ದ ಬೋಧಿಸತ್ವ ಬುದ್ಧ ಫೌಂಡೇಶನ್ ನ ಅಧ್ಯಕ್ಷರು ಹಾಗೂ ಧಮ್ಮಾಚಾರಿ ಶೇಖರ್ ಹಾವಂಜೆಯವರು ಮಾತನಾಡಿ, ಜೀವನದಲ್ಲಿ ಶೋಷಣೆ ಮತ್ತು ನೋವುಗಳನ್ನು ಅನುಭವಿಸಿದವರಿಗೆ ಮಾತ್ರ ಅದರ ಆಳವಾದ ಅರ್ಥ ತಿಳಿಯುತ್ತದೆ ಎಂದರು. ಕರ್ನಾಟಕದ ಅಂಬೇಡ್ಕರ್ ಎಂದೇ ಗೌರವಿಸಲ್ಪಡುವ ಪ್ರೊ. ಬಿ. ಕೃಷ್ಣಪ್ಪ ಅವರ ಹೋರಾಟದ ಸಾಧನೆ ನಮಗೆ ಮಾದರಿಯಾಗಬೇಕು ಎಂದು ಹೇಳಿದರು.

“ತಾಯಿಯ ಒಡಲಿನಿಂದ ಭೂಮಿಗೆ ಬಂದ ಕ್ಷಣದಿಂದಲೇ ಪ್ರತಿಯೊಬ್ಬರಿಗೂ ಸಂವಿಧಾನದ ಆಶಯಗಳು ಅನ್ವಯಿಸುತ್ತವೆ. ಬುದ್ಧರು ಸಾರಿದ ‘ನಿನಗೆ ನೀನೇ ಬೆಳಕು’ ಎಂಬ ಸಂದೇಶವನ್ನು ಅರ್ಥಮಾಡಿಕೊಂಡು ಧಮ್ಮ ಮಾರ್ಗದಲ್ಲಿ ಬದುಕಬೇಕು,” ಎಂದು ಕರೆ ನೀಡಿದರು.

ಮನಸ್ಸಿನ ಸಮತೋಲನ ಕಾಪಾಡಿಕೊಂಡು, ಬಾಬಾಸಾಹೇಬರು ಪ್ರತಿಪಾದಿಸಿದ ಸ್ವತಂತ್ರ ರಾಜಕೀಯ ಚಿಂತನೆಗಳನ್ನು ಬೆಳೆಸಿಕೊಳ್ಳಬೇಕು. ನಮ್ಮನ್ನು ಮೂಲೆಗುಂಪು ಮಾಡಿದವರನ್ನೇ ಗೌರವಿಸುವ ಮನೋಭಾವದಿಂದ ಹೊರಬರಬೇಕು. ಧಮ್ಮ ಮತ್ತು ಬಾಬಾಸಾಹೇಬರ ವಿಚಾರಗಳಲ್ಲಿ ಆಡಂಬರಕ್ಕಿಂತ ಆಚರಣೆ ಮುಖ್ಯ. ಪೆನ್ನು ಮತ್ತು ಕಾಗದಕ್ಕೆ ಶಕ್ತಿ ನೀಡಿರುವುದು ಸಂವಿಧಾನ. ನಮ್ಮನ್ನು ನಾವು ಅರ್ಥಮಾಡಿಕೊಳ್ಳಬೇಕು ಎಂದು ಹೇಳಿದರು.
“ಧರ್ಮವು ಮಾರಾಟದ ಸರಕಾಗುತ್ತಿರುವುದು ಕಳವಳಕಾರಿ. ವಿದ್ಯಾರ್ಥಿಗಳು ಬುದ್ಧರ ಧ್ಯಾನದತ್ತ ಒಲವು ತೋರುತ್ತಿರುವುದು ಆಶಾದಾಯಕ ಬೆಳವಣಿಗೆ. ಜೀವನವನ್ನು ಸರಿಯಾಗಿ ಅರ್ಥಮಾಡಿಕೊಂಡರೆ ಅದು ಕಷ್ಟಕರವಲ್ಲ; ಸರಳ ಮತ್ತು ಸುಂದರವಾಗಿರುತ್ತದೆ. ಪರಿಸರದಲ್ಲಿರುವ ಪ್ರತಿಯೊಂದು ಜೀವಿಯಿಂದಲೂ ಕಲಿಯಲು ಸಾಕಷ್ಟಿದೆ.

ನಮ್ಮ ಬದಲಾವಣೆಯ ಪ್ರಕ್ರಿಯೆಯನ್ನು ಮೂಲದಿಂದಲೇ ಆರಂಭಿಸಬೇಕು,” ಎಂದರು. ಈ ಒಂದು ಅರ್ಥಪೂರ್ಣವಾದ ಕಾರ್ಯಕ್ರಮದಲ್ಲಿ ರವೀಂದ್ರ ಬಂಟಕಲ್ಲು BSI ಉಡುಪಿ, ಚೆನ್ನಬಸವ ಪುತ್ತೂರ್ಕರ್, ಗೋಪಾಲ್ ಶಿವಪುರ ಜಿಲ್ಲಾ ಸಂಚಾಲಕರು ಕ.ದ.ಸಂ.ಸ ಅಂಬೇಡ್ಕರ್ ಮಾರ್ಗ (ರಿ) ಉಡುಪಿ ಜಿಲ್ಲೆ, ಕುಶಲ ರವೀಂದ್ರ, ಮುತ್ತಕ್ಕ, ಸುಜಾತ, ಪೃಥ್ವಿ, ರೂಪಾ.V, ಪೂರ್ಣಿಮಾ, ಸುನೀತಾ, ವನಿತಾ, ಲೀಲಾ, ವಸಂತಿ, ಸುಧೀರ್, ಮಹಾಬಲ, ಪ್ರತಾಪ್, ಸಂತೋಷ್, ಪುಟಾಣಿಗಳಾದ ಸನ್ನತಿ, ಸಾನ್ವಿ, ಸಾತ್ವಿಕ್, ಪಾರಾಮಿ, ಚಿರಾಗ್, ಕೌಶಲ್ ರಾಜ್ K,
ಪ್ರದ್ಯುತ್ E ಅಂಚನ್ ಹಾಗೂ ಅನೇಕ ಉಪಾಸಕ, ಉಪಾಸಿಕರು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಆಯುಷ್ಮಾನ್ ವಿಠಲ್ ಸಾಲಿಕೇರಿ ನಿರೂಪಿಸಿ, ಸ್ವಾಗತಿಸಿದರು. ಉಡುಪಿಯ ಯುವ ಧಮ್ಮಾಚಾರಿಗಳಾದ ಮುರಳೀಧರ್ ಮಾರ್ಪಳ್ಳಿಯವರು ವಂದಿಸಿದರು. ಬೋಧಿಸತ್ವ ಕಲಾತಂಡದ ಕಲಾವಿದರಿಂದ ಅಂಬೇಡ್ಕರ್, ಬುದ್ಧ, ಬಸವಣ್ಣನವರ ಹಾಡು ಪ್ರಸ್ತುತಿ ಪಡಿಸಿದರು.ಹಾವಂಜೆಯ ಬೋಧಿಸತ್ವ ಬುದ್ಧ ವಿಹಾರದಲ್ಲಿ ನಡೆದ ಧಮ್ಮ ದೀಕ್ಷಾ ದಿನಾಚರಣೆಯು ಬುದ್ಧರ ಕರುಣೆ, ಸಮಾನತೆ, ಪ್ರಜ್ಞೆ ಮತ್ತು ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಸಂದೇಶವನ್ನು ಸಾರಿತು.

Swabhimaananews.

Related posts

ಬೋಧಿಸತ್ವ ಬುದ್ಧ ಫೌಂಡೇಶನ್ ಉಡುಪಿ ಜಿಲ್ಲೆ ಇದರ ವತಿಯಿಂದ ಭಗವಾನ್ ಬುದ್ಧರ 2568 ನೇ ಜಯಂತಿ ಆಚರಣೆ.

Swabhimana News Desk

ಉಡುಪಿಯ ಅತೀ ದೊಡ್ಡ ಡಿವೈಡರ್ ಸ್ಯಾಮ್.!! ಅಧಿಕಾರಿಗಳಿಗೆ ಡಿಸಿ ನೊಟೀಸ್. ನಗರಸಭೆ ಸಾಮಾನ್ಯ ಸಭೆಯ ನಿರ್ಣಯ ಕ್ಕಾಗಿ ಕಾಯುತ್ತಿರುವ ಸಾರ್ವಜನಿಕರು

ಭಾರತದ ಸಂವಿಧಾನ ಶಿಲ್ಪಿ ಡಾ.ಬಾಬಸಾಹೇಬ್ ಅಂಬೇಡ್ಕರ್ ರವರಿಗೆ ಮತ್ತು ರಾಜ್ಯದ, ದೇಶದ ದಲಿತ ಸಮುದಾಯಕ್ಕೆ ಬಹಿರಂಗವಾಗಿ ನಿಂದಿಸಿ, ಅಪಮಾನ ಮಾಡಿರುವ ಉಡುಪಿ ಹಿಂದೂ ಜಾಗರಣಾ ವೇದಿಕೆಯ ಉಮೇಶ್ ನಾಯ್ಕನನ್ನು ಕಾಂಗ್ರೆಸ್ ಸರಕಾರ ಈ ಕೂಡಲೇ ಬಂಧಿಸಿ, ಅಂಬೇಡ್ಕರ್ ಮತ್ತು ಸಂವಿಧಾನದ ಪರ ಇರುವುದನ್ನು ಸಾಬೀತು ಪಡಿಸಲಿ.ಶೇಖರ್ ಹಾವಂಜೆ.

Swabhimana News Desk

Leave a Comment