ಉಡುಪಿ: ಅಕ್ಟೋಬರ್ -15-2026 swabhimaananews
ಬ್ರಹ್ಮಾವರ: ಕರಾವಳಿ ಹೈಕೋರ್ಟ್ ಪೀಠ ಹೋರಾಟ ಸಮಿತಿ, ಉಡುಪಿ ಜಿಲ್ಲೆ ನೀಡಿದ ಕರೆಯಂತೆ, ಉಡುಪಿ ಜಿಲ್ಲೆಯಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಯಾಗಬೇಕೆಂಬ ನ್ಯಾಯಯುತ ಬೇಡಿಕೆಗೆ ಬ್ರಹ್ಮಾವರ ತಾಲೂಕು ಹೋರಾಟ ಸಮಿತಿಯು ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದೆ.
ಕರಾವಳಿ ಹೈಕೋರ್ಟ್ ಪೀಠ ಹೋರಾಟ ಸಮಿತಿಯು ಯಾವುದೇ ರಾಜಕೀಯ ರಹಿತ, ಕೇವಲ ಸಾರ್ವಜನಿಕ ಹಿತಾಸಕ್ತಿಯನ್ನು ಮುನ್ನಿಲೆಯಲ್ಲಿಟ್ಟುಕೊಂಡು ವಿವಿಧ ಸಂಘ-ಸಂಸ್ಥೆಗಳು ಹಾಗೂ ಸಾರ್ವಜನಿಕರನ್ನು ಒಂದೇ ವೇದಿಕೆಯಲ್ಲಿ ಜೋಡಿಸಿ ನಡೆಸುತ್ತಿರುವ ಪಕ್ಷಾತೀತ ಹೋರಾಟವಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಉಡುಪಿ ಜಿಲ್ಲೆ ಹೋರಾಟ ಸಮಿತಿಯ ಸಂಚಾಲಕ ಹಾಗೂ ವಕೀಲ ಪ್ರೇಮ್ ಪ್ರಸಾದ್ ಶೆಟ್ಟಿಯವರು, “ಉಡುಪಿಯಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಯಾಗುವುದು ಈ ಇಡೀ ಪ್ರದೇಶದ ಬದಲಾವಣೆಗೆ ಪ್ರಮುಖ ದಾರಿದೀಪವಾಗಲಿದೆ:
ಕಕ್ಷಿದಾರರಿಗೆ ಅನುಕೂಲ: ನ್ಯಾಯಕ್ಕಾಗಿ ಬೆಂಗಳೂರಿಗೆ ಅಲೆಯುತ್ತಿರುವ ಸಾವಿರಾರು ಕಕ್ಷಿದಾರರಿಗೆ ಇದು ಅತ್ಯಂತ ದೊಡ್ಡ ಮಟ್ಟದ ಅನುಕೂಲ ಹಾಗೂ ಆಸರೆಯಾಗಲಿದೆ.
ಸಮಯ ಮತ್ತು ಹಣದ ಉಳಿತಾಯ: ಸಾರ್ವಜನಿಕರು ಹಾಗೂ ಸಣ್ಣ ಕುಟುಂಬಗಳ ಅಮೂಲ್ಯ ಸಮಯ, ಶ್ರಮ ಮತ್ತು ಭಾರಿ ಪ್ರಮಾಣದ ಹಣಕಾಸಿನ ವೆಚ್ಚವನ್ನು ಇದು ಉಳಿಸಲಿದೆ.
ಆಡಳಿತ ಯಂತ್ರಕ್ಕೆ ಚುರುಕು: ಪ್ರಾದೇಶಿಕವಾಗಿ ಹೈಕೋರ್ಟ್ ಪೀಠ ಕಾರ್ಯಾಚರಿಸುವುದರಿಂದ ಜಿಲ್ಲಾಡಳಿತ ಹಾಗೂ ಸ್ಥಳೀಯ ಆಡಳಿತ ಯಂತ್ರವು ಇನ್ನಷ್ಟು ಜಾಗರೂಕತೆಯಿಂದ ಮತ್ತು ಚುರುಕಾಗಿ ಕಾರ್ಯನಿರ್ವಹಿಸಲು ನೆರವಾಗುತ್ತದೆ.
ಈ ನಾಡಿನ ಮತ್ತು ಜಿಲ್ಲೆಯ ಸುದೀರ್ಘ ಹಿತದೃಷ್ಟಿಯಿಂದ ಪ್ರತಿಯೊಂದು ಪಕ್ಷ, ವರ್ಗ, ಕ್ಷೇತ್ರ ಹಾಗೂ ಸಮಾಜದ ಎಲ್ಲಾ ಸ್ತರದ ಜನರು ತಮ್ಮ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಈ ಹೋರಾಟಕ್ಕೆ ಪೂರ್ಣ ಪ್ರಮಾಣದ ಬೆಂಬಲ ನೀಡಬೇಕಾಗಿ” ವಿನಂತಿಸಿಕೊಂಡರು.
ಕರಾವಳಿ ಭಾಗದ ಜನರ ಬಹುದಿನಗಳ ಈ ಬೇಡಿಕೆಯನ್ನು ಪರಿಶೀಲಿಸಲು ಮಾನ್ಯ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ಸೆಪ್ಟೆಂಬರ್ 29, 2026 ರಂದು ತ್ರಿಸದಸ್ಯ ನ್ಯಾಯಾಧೀಶರ ಸಮಿತಿ (ನ್ಯಾಯಮೂರ್ತಿ ಶ್ರೀಮತಿ ಅನು ಶಿವರಾಮನ್, ಮಾನ್ಯ ನ್ಯಾಯಮೂರ್ತಿ ಎಸ್. ಜಿ. ಪಂಡಿತ್ ಹಾಗೂ ಮಾನ್ಯ ನ್ಯಾಯಮೂರ್ತಿ ಮೊಹಮ್ಮದ್ ನವಾಜ್) ಯನ್ನು ರಚಿಸಿರುವುದನ್ನು ಹೋರಾಟ ಸಮಿತಿಯು ಆತ್ಮೀಯವಾಗಿ ಸ್ವಾಗತಿಸುತ್ತದೆ.
ಉಡುಪಿ ಜಿಲ್ಲೆಯು ಮೂರೂ ಕರಾವಳಿ ಜಿಲ್ಲೆಗಳಿಗೆ (ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ) ಕೇಂದ್ರ ಬಿಂದುವಾಗಿದ್ದು, ನೆರೆಯ ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳ ತಾಲೂಕುಗಳಿಗೂ ಅತ್ಯಂತ ಸಮೀಪದಲ್ಲಿದೆ. ಆದ್ದರಿಂದ ಉದ್ದೇಶಿತ ಸಂಚಾರಿ/ಶಾಶ್ವತ ಹೈಕೋರ್ಟ್ ಪೀಠವನ್ನು ಉಡುಪಿ ಜಿಲ್ಲೆಯಲ್ಲೇ ಸ್ಥಾಪಿಸಬೇಕೆಂದು ಸಮಿತಿಯು ಬಲವಾಗಿ ಆಗ್ರಹಿಸುತ್ತದೆ. ಈ ನಿಟ್ಟಿನಲ್ಲಿ ಮುಂದಿನ ಹೋರಾಟದ ರೂಪುರೇಷೆಗಳನ್ನು ಸಿದ್ಧಪಡಿಸಲು ಹಾಗೂ ಸಾರ್ವಜನಿಕ ಬೆಂಬಲವನ್ನು ಕ್ರೋಡೀಕರಿಸಲು ಬ್ರಹ್ಮಾವರದಲ್ಲಿ ಬೃಹತ್ ಹಕ್ಕೊತ್ತಾಯ ಸಭೆಯನ್ನು ಆಯೋಜಿಸಲಾಗಿದೆ.
*ಸಭೆಯ ವಿವರಗಳು*
ಹೈಕೋರ್ಟ್ ಪೀಠ ಸ್ಥಾಪನೆಗಾಗಿ ಬ್ರಹ್ಮಾವರ ತಾಲೂಕು ಹಕ್ಕೊತ್ತಾಯ ಸಭೆ
*ದಿನಾಂಕ
ಶನಿವಾರ, ಅಕ್ಟೋಬರ್ 17, 2026*
*ಸಮಯ
ಬೆಳಿಗ್ಗೆ 10:30ಕ್ಕೆ*
*ಸ್ಥಳ
ಬಂಟರ ಭವನ ಸಭಾಂಗಣ, ಬ್ರಹ್ಮಾವರ*
*ಸಾರ್ವಜನಿಕರಲ್ಲಿ ಮನವಿ:* ಈ ಮಹತ್ವದ ಬೇಡಿಕೆ ಸಭೆಯಲ್ಲಿ ಗೌರವಾನ್ವಿತ ವಕೀಲರು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಮುಖಂಡರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಈ ಹೋರಾಟವನ್ನು ಯಶಸ್ವಿಗೊಳಿಸಬೇಕಾಗಿ ವಿನಂತಿಸಿಕೊಳ್ಳುತ್ತಿದ್ದೇವೆ
*ಮಾಧ್ಯಮ ಮಿತ್ರರಿಗೆ ವಿಶೇಷ ಮನವಿ:* ಕರಾವಳಿ ಪ್ರದೇಶದ ಹಾಗೂ ನಮ್ಮ ಜಿಲ್ಲೆಯ ಅಭಿವೃದ್ಧಿ ಮತ್ತು ನ್ಯಾಯಪರ ಹಿತದೃಷ್ಟಿಯಿಂದ ಈ ವಿಷಯವು ಅತ್ಯಂತ ಪ್ರಮುಖವಾಗಿದ್ದು, ಪತ್ರಿಕಾ ಹಾಗೂ ದೃಶ್ಯ ಮಾಧ್ಯಮದ ಮಿತ್ರರು ಈ ಬೇಡಿಕೆ ಸಭೆಗೆ ವ್ಯಾಪಕ ಪ್ರಚಾರ ಮತ್ತು ವರದಿಗಾರಿಕೆ ನೀಡಿ ಸಹಕರಿಸಬೇಕಾಗಿ ವಿನಂತಿಸುತ್ತೇವೆ.
*ಪ್ರೇಮ್ ಪ್ರಸಾದ್ ಶೆಟ್ಟಿ,* ವಕೀಲರು ಹಾಗೂ
ಸಂಚಾಲಕರು, ಕರಾವಳಿ ಹೈಕೋರ್ಟ್ ಪೀಠ ಹೋರಾಟ ಸಮಿತಿ, ಉಡುಪಿ ಜಿಲ್ಲೆ ಹಾಗೂ ಸಂಸ್ಥಾಪಕರು – ಯು-ಆಕ್ಟ್
ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದವರು :*
1. ಪ್ರೇಮ್ ಪ್ರಸಾದ್ ಶೆಟ್ಟಿ (ವಕೀಲರು ಹಾಗೂ ಸಂಚಾಲಕರು, ಕರಾವಳಿ ಹೈಕೋರ್ಟ್ ಪೀಠ ಹೋರಾಟ ಸಮಿತಿ, ಉಡುಪಿ ಜಿಲ್ಲೆ)
2. ಬಿ. ಭುಜಂಗ ಶೆಟ್ಟಿ (ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರು)
3. ಕಾಡೂರು ಪ್ರವೀಣ್ ಶೆಟ್ಟಿ (ಅಧ್ಯಕ್ಷರು, ಬ್ರಹ್ಮಾವರ ವಕೀಲರ ಸಂಘ)
4. ಶೇಖರ್ ಹಾವಂಜೆ (ಸಾಮಾಜಿಕ ಕಾರ್ಯಕರ್ತರು)
5. ಆಲ್ವಿನ್ ಅಂದ್ರಾದೆ (ರೋಟೇರಿಯನ್ ಹಾಗೂ ಸಾಮಾಜಿಕ ಕಾರ್ಯಕರ್ತರು)
6. ಮಹೇಶ್ ತಡೆಕಲ್ಲು (ಸಾಮಾಜಿಕ ಕಾರ್ಯಕರ್ತರು)
7.ಚೆನ್ನಬಸವ ಪುತ್ತೂರ್ಕರ್ ಸಾಹಿತಿ, ಬರಹಗಾರರು.
Swabhimaananews .

