ಉಡುಪಿ:ಜುಲೈ -23-2025-Swabhimananews
ಬೋಧಿಸತ್ವ ಬುದ್ಧ ಫೌಂಡೇಶನ್ (ರಿ) ಉಡುಪಿ ಜಿಲ್ಲೆ, ಕರ್ನಾಟಕ ದಲಿತ ಸಂಘರ್ಷ ಸಮಿತಿ ಭೀಮವಾದ (ರಿ) ಉಡುಪಿ ಜಿಲ್ಲೆ ಮತ್ತು ಆರ್.ಪಿ.ಐ.ಕ ಉಡುಪಿ ಜಿಲ್ಲೆ ಇವರ ಜಂಟಿ ನೇತೃತ್ವದಲ್ಲಿ. ವಿಶೇಷ ನಾಗರ ಪಂಚಮಿ ಆಚರಣೆ.
ಸಮಾಜದಲ್ಲಿ ನಾಗರ ಪಂಚಮಿ ಆಚರಣೆಯ ಹೆಸರಲ್ಲಿ ನೂರಾರು ಕೋಟಿ ರೂಪಾಯಿ
ಮೌಲ್ಯದ ಪೌಷ್ಠಿಕ ಆಹಾರವಾದ ಹಾಲು, ಹಣ್ಣು- ಹಂಪಲು, ಎಳನೀರು, ತುಪ್ಪ, ಜೇನುತುಪ್ಪ ಮುಂತಾದ ಪೌಷ್ಠಿಕ ಆಹಾರವನ್ನು ಜೀವವೇ ಇರದ ಕಲ್ಲಿನ ನಾಗರಹಾವಿಗೆ ಎರೆದು, ಸುರಿದು ಮಣ್ಣಲ್ಲಿ ಮಣ್ಣಾಗಿ ಹೋಗುವಂತದ್ದನ್ನೂ ನಾವು, ನೀವೆಲ್ಲರೂ ಹುಟ್ಟಿನಿಂದಲೂ ನೋಡುತ್ತಲೇ ಬಂದಿದ್ದೇವೆ.
ಇಂದಿಗೂ ನಮ್ಮ ಜಿಲ್ಲೆಗಳಲ್ಲಿ, ಇಡೀ ರಾಜ್ಯದಲ್ಲಿ ಅಪೌಷ್ಠಿಕತೆಯಿಂದ ದಿನನಿತ್ಯ ನೂರಾರು ಜನರು, ಮಹಿಳೆಯರು, ಮಕ್ಕಳು ಸೇರಿದಂತೆ ಸಾಯುತ್ತಿರುವುದನ್ನು ಕೇಳುತ್ತಲೇ ಇದ್ದೇವೆ, ನೋಡುತ್ತಲೇ ಇದ್ದೇವೆ.
ಇದನ್ನು ಪ್ರಶ್ನೆ ಮಾಡಬೇಕಾದ ಪ್ರಜ್ಞಾವಂತರು, ನಮ್ಮ ನಾಳುವ ಸರಕಾರಗಳು ಇದನ್ನು ಪೋಷಣೆ ಮಾಡುತ್ತಲೇ ಬಂದಿದೆ. ಈ ಒಂದು ನಾಗರ ಪಂಚಮಿಯಂದು ಕಲ್ಲು ನಾಗನಿಗೆ ಪೌಷ್ಠಿಕ ಆಹಾರಗಳನ್ನು ಎರೆದು ವ್ಯರ್ಥ ಮಾಡುವ ಬದಲು ಸಮಾಜದ ಉದ್ದಗಲಕ್ಕೂ ಇರುವ ವಿಶೇಷ ಚೇತನರಿಗೆ, ಅನಾಥರಿಗೆ, ನಿರ್ಗತಿಕರಿಗೆ, ಅಪೌಷ್ಠಿಕತೆಯಿಂದ ಬಳಲುತ್ತಿರುವವರಿಗೆ ವೃದ್ಧರಿಗೆ ನೀಡಿದರೆ ಈ ಅಪೌಷ್ಟಿಕತೆಯಿಂದ ಬಳಲುವವರ ಸಂಖ್ಯೆ ನಿಲ್ಲಬಹುದು ಮತ್ತು ಈ ಮೂಢನಂಬಿಕೆಯನ್ನು ಸಮಾಜಕ್ಕೆ ತಿಳಿಸಬೇಕು.
ವೈಜ್ಞಾನಿಕ ಬದುಕು ಎಂದರೆ ಯಾವುದು ಎನ್ನುವುದನ್ನು ಇಡೀ ದೇಶಕ್ಕೆ ಸಂದೇಶ ಸಾರಬೇಕೆಂಬ ನಿಟ್ಟಿನಲ್ಲಿ ಕಳೆದ 20 ವರ್ಷಕ್ಕೂ ಹಿಂದಿನಿಂದ ಕರ್ನಾಟಕ ದಲಿತ ಸಂಘರ್ಷ ಸಮಿತಿ ಭೀಮವಾದ (ರಿ) ಸಂಘಟನೆ ಪ್ರತಿ ವರ್ಷ ಜಿಲ್ಲೆಯ ವಿವಿಧ ಕಡೆಗಳಲ್ಲಿರುವ ಅನೇಕ ವಿಶೇಷ ಚೇತನರ ಶಾಲೆಗಳಿಗೆ, ಅನಾಥಾಶ್ರಮಗಳಿಗೆ, ಅನಾಥ ಶಿಶು ಮಂದಿರಗಳಿಗೆ, ವೃದ್ಧಾಶ್ರಮಗಳಿಗೆ ಈ ನಾಗರ ಪಂಚಮಿಯ ದಿನದಂದು ಹಾಲು, ಹಣ್ಣು-ಹಂಪಲು, ದಿನಬಳಕೆಯ ಸಾಮಾಗ್ರಿಗಳನ್ನು ನೀಡುತ್ತಲೇ ಬಂದಿತ್ತು.
ಕಳೆದ 5 ವರ್ಷಗಳಿಂದ ಈ ಸಂಘಟನೆಯೊಂದಿಗೆ ಬೋಧಿಸತ್ವ ಬುದ್ಧ ಫೌಂಡೇಶನ್, ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ ಪಕ್ಷ ಉಡುಪಿ ಜಿಲ್ಲೆ ಮತ್ತು ಕೆಲವು ಸಾಮಾಜಿಕ ಹೋರಾಟಗಾರರೂ ಜೊತೆಗೂಡಿ ಈ ಒಂದು ಕಾರ್ಯವನ್ನು ಮಾಡಿಕೊಂಡು ಬರುತ್ತಿದೆ.
ಅದರಂತೆ ಈ ಬಾರಿಯೂ ಕೂಡ ದಿನಾಂಕ 29.07.2025 ರ ಮಂಗಳವಾರದಂದು ಬ್ರಹ್ಮಾವರ ತಾಲೂಕಿನ ಉಪ್ಪೂರು ಗ್ರಾಮದಲ್ಲಿರುವ ಸ್ಪಂದನ ವಿಶೇಷ ಚೇತನರ ಶಾಲೆಗೆ ಮತ್ತು ಉಡುಪಿ ತಾಲೂಕಿನ ನೇಜಾರಿನಲ್ಲಿರುವ ಸ್ಪಂದನ ದಿವ್ಯಾಂಗರ ತರಬೇತಿ ಕೇಂದ್ರಕ್ಕೆ ಹಾಲು, ಹಣ್ಣು-ಹಂಪಲು, ಸಿಹಿ-ತಿಂಡಿ ವಿತರಿಸಿ ಸಮಾಜಕ್ಕೊಂದು ಸಂದೇಶ ಕೊಟ್ಟಿದ್ದೇವೆ.
ಮುಂದಿನ ದಿನಗಳಲ್ಲಿ ಪ್ರತಿಯೊಬ್ಬರು ಈ ವೈಜ್ಞಾನಿಕ ಬದುಕನ್ನು ಅರ್ಥೈಸಿಕೊಂಡು ಪ್ರತಿಯೊಬ್ಬರೂ ಜೀವಿಸಬೇಕಾಗಿದೆ ಎಂದು ಈ ಸಂಸ್ಥೆಗಳ ಮುಖ್ಯಸ್ಥರು ತಿಳಿಸಿದರು.
ಇಂದಿನ ಈ ಕಾರ್ಯಕ್ರಮದಲ್ಲಿ ಬೋಧಿಸತ್ವ ಬುದ್ಧ ಫೌಂಡೇಶನ್ ನ ಅಧ್ಯಕ್ಷರಾದ ಶೇಖರ್ ಹಾವಂಜೆ, ಪ್ರಧಾನ ಕಾರ್ಯದರ್ಶಿ ಶರತ್.ಎಸ್ ಹಾವಂಜೆ, ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ ಪಕ್ಷದ ಜಿಲ್ಲಾ ಉಪಾಧ್ಯಕ್ಷರಾದ ಗೋಪಾಲ್ ಶಿವಪುರ, ಸಾಮಾಜಿಕ ಹೋರಾಟಗಾರರಾದ ಅನಿಲ್ ಫೆರ್ನಾಂಡಿಸ್ ಬಾರ್ಕೂರು, ಕದಸಂಸ ಭೀಮವಾದದ ಜಿಲ್ಲಾ ಸಂಘಟನಾ ಸಂಚಾಲಕರಾದ ರಮೇಶ್ ಮಾಬಿಯಾನ್, ಜಿಲ್ಲಾ ಖಜಾಂಚಿ ಪೃಥ್ವಿ ಒಳಗುಡ್ಡೆ, ಜಿಲ್ಲಾ ಸಮಿತಿ ಸದಸ್ಯರಾದ ಸುಜಾತ.ಎಸ್ ಹಾವಂಜೆ ಉಪಸ್ಥಿತರಿದ್ದರು.
Swabhimananews