4 November 2026
CoastalKarnataka

ಉಡುಪಿ ನಗರಸಭೆಯ ವಾಣಿಜ್ಯ ಕಟ್ಟಡದ ಜಾಗ ಖಾಸಗಿ ಆಸ್ಪತ್ರೆಯ ಪಾರ್ಕಿಂಗ್‌ಗೆ? ಸರ್ಕಾರಿ ಆಸ್ತಿಯ ಬಳಕೆಯ ಬಗ್ಗೆ ಸಾರ್ವಜನಿಕರ ಆಕ್ರೋಶ – ತನಿಖೆಗೆ ಆಗ್ರಹ

ಉಡುಪಿ| ನವೆಂಬರ್- 04-2026 swabhimaananews

ಸ್ವಾಭಿಮಾನ ವೆಬ್‌ಸೈಟ್ ಸುದ್ದಿ

ಉಡುಪಿ ನಗರದ ಹೃದಯಭಾಗದಲ್ಲಿರುವ ಹಳೆಯ ಡೈಲಿ ಮಾರುಕಟ್ಟೆಯ ನಗರಸಭೆಯ ಬೃಹತ್ ವಾಣಿಜ್ಯ ಕಟ್ಟಡದ ಜಾಗ ಇದೀಗ ಖಾಸಗಿ ಆಸ್ಪತ್ರೆಯ ವಾಹನಗಳ ಪಾರ್ಕಿಂಗ್‌ಗೆ ಬಳಕೆಯಾಗುತ್ತಿದೆ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಹಳೆಯ ಕಟ್ಟಡವನ್ನು ತೆರವುಗೊಳಿಸಿ, ಅದರ ಸ್ಥಳದಲ್ಲಿ ಹೊಸ ವಾಣಿಜ್ಯ ಕಟ್ಟಡ ನಿರ್ಮಿಸುವುದಾಗಿ ಸಾರ್ವಜನಿಕರಿಗೆ ಭರವಸೆ ನೀಡಲಾಗಿತ್ತು ಎನ್ನಲಾಗಿದೆ. ಆದರೆ, ಕೋಟ್ಯಂತರ ರೂಪಾಯಿ ಮೌಲ್ಯದ ಸರ್ಕಾರಿ ಆಸ್ತಿಯಲ್ಲಿ ಹೊಸ ವಾಣಿಜ್ಯ ಕಟ್ಟಡ ನಿರ್ಮಾಣವಾಗದೆ, ಖಾಸಗಿ ಆಸ್ಪತ್ರೆಯ ವಾಹನಗಳ ನಿಲುಗಡೆಗೆ ಜಾಗ ಬಳಸಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.

ಈ ಬೆಳವಣಿಗೆಯು ನಗರಸಭೆಯ ಆಸ್ತಿ ನಿರ್ವಹಣೆ ಹಾಗೂ ಸಾರ್ವಜನಿಕ ಹಿತಾಸಕ್ತಿಯ ಕುರಿತು ಹಲವು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಯಾವ ಒಪ್ಪಂದದ ಆಧಾರದ ಮೇಲೆ ಪಾರ್ಕಿಂಗ್‌ಗೆ ಅವಕಾಶ?

ನಗರಸಭೆಗೆ ಸೇರಿದ ಈ ಜಾಗವನ್ನು ಖಾಸಗಿ ಆಸ್ಪತ್ರೆಯ ವಾಹನಗಳ ಪಾರ್ಕಿಂಗ್‌ಗೆ ಬಳಸಲು ಅನುಮತಿ ನೀಡಲಾಗಿದೆಯೇ? ಅನುಮತಿ ನೀಡಿದ್ದರೆ ಯಾವ ಷರತ್ತುಗಳ ಆಧಾರದ ಮೇಲೆ ನೀಡಲಾಗಿದೆ? ಇದಕ್ಕೆ ನಗರಸಭೆಯ ಸಾಮಾನ್ಯ ಸಭೆಯ ಅನುಮೋದನೆ ಇದೆಯೇ? ನಗರಸಭೆಗೆ ಇದರಿಂದ ಯಾವುದೇ ಆದಾಯ ಬರುತ್ತಿದೆಯೇ?

ಈ ಎಲ್ಲಾ ಪ್ರಶ್ನೆಗಳಿಗೆ ಉಡುಪಿ ನಗರಸಭೆಯ ಪೌರಾಯುಕ್ತರು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಸಾರ್ವಜನಿಕರಿಗೆ ಸ್ಪಷ್ಟ ಉತ್ತರ ನೀಡಬೇಕಾಗಿದೆ.
ಸಣ್ಣ ವ್ಯಾಪಾರಿಗಳ ಬದುಕಿಗೆ ಕೊಳ್ಳಿ?
ಈ ಹಿಂದೆ ಇದೇ ಸ್ಥಳದಲ್ಲಿ ಸಣ್ಣಪುಟ್ಟ ವ್ಯಾಪಾರ ನಡೆಸಿಕೊಂಡು ತಮ್ಮ ಕುಟುಂಬಗಳ ಜೀವನೋಪಾಯ ಸಾಗಿಸುತ್ತಿದ್ದ ಅನೇಕ ವ್ಯಾಪಾರಿಗಳು ಕಟ್ಟಡ ತೆರವುಗೊಂಡ ಬಳಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ ಎನ್ನಲಾಗಿದೆ.

ಹೊಸ ವಾಣಿಜ್ಯ ಕಟ್ಟಡ ನಿರ್ಮಿಸಿ ವ್ಯಾಪಾರಿಗಳಿಗೆ ಅವಕಾಶ ಕಲ್ಪಿಸುವ ಭರವಸೆ ನೀಡಲಾಗಿದ್ದರೆ, ಆ ಭರವಸೆ ಏನಾಯಿತು? ಜೀವನೋಪಾಯ ಕಳೆದುಕೊಂಡ ಸಣ್ಣ ವ್ಯಾಪಾರಿಗಳ ಪುನರ್ವಸತಿ ಕುರಿತು ನಗರಸಭೆ ಯಾವ ಕ್ರಮ ಕೈಗೊಂಡಿದೆ ಎಂಬ ಪ್ರಶ್ನೆಯೂ ಸಾರ್ವಜನಿಕರಿಂದ ಕೇಳಿಬರುತ್ತಿದೆ.

ಜಿಲ್ಲಾಧಿಕಾರಿಗಳು ಮಧ್ಯಪ್ರವೇಶಿಸಲಿ
ಸರ್ಕಾರಿ ಆಸ್ತಿಯ ಬಳಕೆಯ ಕುರಿತು ಉಡುಪಿ ಜಿಲ್ಲಾಧಿಕಾರಿಗಳು ಕೂಡಲೇ ಮಧ್ಯಪ್ರವೇಶಿಸಿ ಸಮಗ್ರ ತನಿಖೆ ನಡೆಸಬೇಕು ಎಂಬ ಆಗ್ರಹ ವ್ಯಕ್ತವಾಗಿದೆ.

ನಗರಸಭೆಯ ಜಾಗವನ್ನು ಖಾಸಗಿ ಆಸ್ಪತ್ರೆಯ ಪಾರ್ಕಿಂಗ್‌ಗೆ ಬಳಸಲು ಕಾನೂನುಬದ್ಧ ಅನುಮತಿ ನೀಡಲಾಗಿದೆಯೇ? ಸಾರ್ವಜನಿಕ ಆಸ್ತಿಯ ಬಳಕೆಯಲ್ಲಿ ನಿಯಮ ಉಲ್ಲಂಘನೆಯಾಗಿದೆಯೇ? ನಗರಸಭೆಗೆ ಆರ್ಥಿಕ ನಷ್ಟ ಉಂಟಾಗಿದೆಯೇ? ಎಂಬ ಅಂಶಗಳನ್ನು ಪರಿಶೀಲಿಸಬೇಕಾಗಿದೆ.

ಒಂದು ವೇಳೆ ಸರ್ಕಾರಿ ಆಸ್ತಿಯ ದುರುಪಯೋಗ ಅಥವಾ ನಿಯಮ ಉಲ್ಲಂಘನೆ ನಡೆದಿರುವುದು ತನಿಖೆಯಲ್ಲಿ ದೃಢಪಟ್ಟರೆ, ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಹೊಣೆಗಾರರ ವಿರುದ್ಧ ಕಾನೂನುಬದ್ಧ ಕ್ರಮ ಕೈಗೊಳ್ಳಬೇಕು.
ಸಾರ್ವಜನಿಕರ ಹಿತಾಸಕ್ತಿಗೆ ಆದ್ಯತೆ ನೀಡಲಿ
ಈ ಜಾಗದಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಹೊಸ ಸರ್ಕಾರಿ ವಾಣಿಜ್ಯ ಕಟ್ಟಡ ನಿರ್ಮಿಸಿ, ಜೀವನೋಪಾಯ ಕಳೆದುಕೊಂಡ ಸಣ್ಣ ವ್ಯಾಪಾರಿಗಳಿಗೆ ನ್ಯಾಯಯುತವಾಗಿ ವ್ಯಾಪಾರ ನಡೆಸಲು ಅವಕಾಶ ಕಲ್ಪಿಸಬೇಕು ಎಂಬುದು ಸಾಮಾಜಿಕ ಹೋರಾಟಗಾರರು ಹಾಗೂ ವಿವಿಧ ಸಂಘಟನೆಗಳ ಆಗ್ರಹವಾಗಿದೆ.
ಸರ್ಕಾರಿ ಆಸ್ತಿ ಸಾರ್ವಜನಿಕರ ಆಸ್ತಿ.

ಅದರ ಬಳಕೆ ಸಾರ್ವಜನಿಕ ಹಿತಾಸಕ್ತಿಗೆ ಪೂರಕವಾಗಿರಬೇಕು. ಖಾಸಗಿ ಹಿತಾಸಕ್ತಿಗಳಿಗೆ ಅವಕಾಶ ನೀಡುವ ಸಂದರ್ಭದಲ್ಲಿ ಪಾರದರ್ಶಕತೆ, ಕಾನೂನುಬದ್ಧತೆ ಮತ್ತು ಸಾರ್ವಜನಿಕ ಜವಾಬ್ದಾರಿಯನ್ನು ಕಡ್ಡಾಯವಾಗಿ ಪಾಲಿಸಬೇಕು.
ಈ ಕುರಿತು ಉಡುಪಿ ನಗರಸಭೆ, ಜಿಲ್ಲಾಡಳಿತ ಹಾಗೂ ಸಂಬಂಧಪಟ್ಟ ಖಾಸಗಿ ಆಸ್ಪತ್ರೆಯ ಆಡಳಿತ ಮಂಡಳಿ ತಮ್ಮ ಅಧಿಕೃತ ಸ್ಪಷ್ಟನೆ ನೀಡಬೇಕಾಗಿದೆ.

Swabhimaananews.

Related posts

ಸೌಜನ್ಯಾಳ ಅತ್ಯಾಚಾರ ಮತ್ತು ಹತ್ಯೆ ಪ್ರಕರಣವನ್ನು ಮರುತನಿಖೆಗೆ
ಒತ್ತಾಯಿಸಿ ಉಡುಪಿಯಲ್ಲಿ ಅಂಬೇಡ್ಕರ್ ಯುವಸೇನೆ ಮತ್ತು ಪ್ರಗತಿಪರ ಸಂಘಟನೆಗಳ ಪ್ರತಿಭಟನೆ,

Swabhimana News Desk

ಭೂಗಳ್ಳರ ವಿರುದ್ಧ ದೂರು ನೀಡಿದ ಸಾಮಾಜಿಕ ಹೋರಾಟಗಾರ ದಲಿತ ಮುಖಂಡ ಶೇಖರ್ ಹಾವಂಜೆ ರವರಿಗೆ ಜೀವ ಬೆದರಿಕೆ!

Swabhimana News Desk

ಸಂವಿಧಾನ ಸಮರ್ಪಣಾ ದಿನಾಚರಣೆ

Swabhimana News Desk

Leave a Comment