18.7 C
New York
15 September 2026
Coastal

ಮೀಸಲು ಅರಣ್ಯದಲ್ಲೇ ಹಾಡಹಗಲೇ ಕೋಟ್ಯಂತರ ರೂಪಾಯಿ ಬೆಲೆಬಾಳುವ ಅಮೂಲ್ಯವಾದ ಮರಗಳ ಮಾರಣಹೋಮ!

ಅರಣ್ಯಾಧಿಕಾರಿಗಳ ನಿರ್ಲಕ್ಷ್ಯವೇ? ಒಳಒಪ್ಪಂದದ ಆರೋಪಕ್ಕೆ ಪುಷ್ಟಿ ನೀಡಿದ ಮುನಿಯಾಲು ಪ್ರಕರಣ

ಉಡುಪಿ, ಸೆ.15-2026- swabhimaananews ಉಡುಪಿ ಜಿಲ್ಲೆಯ ವಿವಿಧ ತಾಲೂಕುಗಳ ಅರಣ್ಯ ಪ್ರದೇಶ ಹಾಗೂ ಮೀಸಲು ಅರಣ್ಯಗಳಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಅಮೂಲ್ಯ ಮರಗಳನ್ನು ಅಕ್ರಮವಾಗಿ ಕಡಿದು ಸಾಗಿಸಲಾಗುತ್ತಿದೆ ಎಂಬ ಗಂಭೀರ ಆರೋಪಗಳು ಕೇಳಿಬರುತ್ತಿವೆ.

ಅರಣ್ಯ ಸಂಪತ್ತಿನ ರಕ್ಷಣೆಗೆ ನಿಯೋಜಿಸಲಾಗಿರುವ ಅಧಿಕಾರಿಗಳ ನಿರ್ಲಕ್ಷ್ಯ ಅಥವಾ ಕೆಲವರ ಒಳಒಪ್ಪಂದದಿಂದಲೇ ಈ ಅಕ್ರಮ ದಂಧೆ ನಡೆಯುತ್ತಿದೆ ಎಂಬ ಆರೋಪವನ್ನು ಸ್ಥಳೀಯರು ಹಾಗೂ ಸಾಮಾಜಿಕ ಹೋರಾಟಗಾರರು ಮಾಡಿದ್ದಾರೆ.

ಅರಣ್ಯ ಪ್ರದೇಶದಲ್ಲಿ ಮರಗಳ ಕಡಿತದ ಕುರಿತು ಸ್ಥಳೀಯರು ಅಥವಾ ಹೋರಾಟಗಾರರು ಅಧಿಕಾರಿಗಳನ್ನು ಪ್ರಶ್ನಿಸಿದಾಗ, “ದೇವಸ್ಥಾನಕ್ಕೆ, ದೈವಸ್ಥಾನಕ್ಕೆ ಅಥವಾ ಗುಡಿ-ಗುಂಡಾರಗಳಿಗೆ ಮರ ಬೇಕಾಗಿದೆ” ಎಂಬ ಹಾರಿಕೆಯ ಉತ್ತರ ನೀಡಲಾಗುತ್ತಿದೆ ಎಂಬ ಆರೋಪವೂ ಕೇಳಿಬಂದಿದೆ.

ಮುನಿಯಾಲು–ಮುಟ್ಲುಪಾಡಿಯಲ್ಲಿ ಹಾಡಹಗಲೇ ಮರಗಳ ಕಡಿತ
ಇದಕ್ಕೆ ಉದಾಹರಣೆಯಾಗಿ 2026ರ ಸೆಪ್ಟೆಂಬರ್ 11ರಂದು ಶುಕ್ರವಾರ, ಕುದುರೆಮುಖ ರಾಷ್ಟ್ರೀಯ ಉದ್ಯಾನವನಕ್ಕೆ ಹೊಂದಿಕೊಂಡಿರುವ ಮುನಿಯಾಲು–ಮುಟ್ಲುಪಾಡಿ ಪಡು ದರ್ಖಾಸು ಪ್ರದೇಶದಲ್ಲಿ ನಡೆದ ಘಟನೆ ಬೆಳಕಿಗೆ ಬಂದಿದೆ.

ಸ್ಥಳೀಯರ ಪ್ರಕಾರ, ಯಂತ್ರೋಪಕರಣಗಳನ್ನು ಬಳಸಿ ನೂರಾರು ವರ್ಷಗಳಷ್ಟು ಹಳೆಯದಾದ ದೈತ್ಯ ಮರಗಳನ್ನು ಹಾಡಹಗಲೇ ಕಡಿದು ಹಾಕಲಾಗಿದೆ. ಕಿರಾಲು ಬೋಗಿ, ಹೆಬ್ಬಲಸು ಸೇರಿದಂತೆ 10ಕ್ಕೂ ಹೆಚ್ಚು ಬೃಹತ್ ಮರಗಳನ್ನು ಕಡಿದು ಅಕ್ರಮವಾಗಿ ಸಾಗಿಸಲು ಯತ್ನಿಸಲಾಗಿದೆ ಎಂಬ ಆರೋಪವಿದೆ.

ಸ್ಥಳೀಯರು ಮರ ಕಡಿಯುತ್ತಿದ್ದವರನ್ನು ಪ್ರಶ್ನಿಸಿದಾಗ, “ಕಾರ್ಕಳ ಮೂರೂರು ದೇವಸ್ಥಾನ ಹಾಗೂ ದೈವದ ಗರಡಿಗೆ ಮರ ಕಡಿಯಲಾಗುತ್ತಿದೆ” ಎಂದು ಹೇಳಿ ಸ್ಥಳದಿಂದ ತೆರಳಿದ್ದಾರೆ ಎನ್ನಲಾಗಿದೆ.

ಕಳ್ಳಬೇಟೆ ತಡೆ ಶಿಬಿರದಿಂದ ಕೇವಲ 200–300 ಮೀಟರ್ ದೂರ!
ಈ ಪ್ರಕರಣದಲ್ಲಿ ಮತ್ತೊಂದು ಗಂಭೀರ ಪ್ರಶ್ನೆ ಸಾರ್ವಜನಿಕರನ್ನು ಕಾಡುತ್ತಿದೆ. ಮರಗಳನ್ನು ಕಡಿದ ಪ್ರದೇಶವು ಅರಣ್ಯ ಇಲಾಖೆಯ ಕಳ್ಳಬೇಟೆ ತಡೆ ಶಿಬಿರದಿಂದ ಕೇವಲ 200ರಿಂದ 300 ಮೀಟರ್ ದೂರದಲ್ಲಿದೆ ಎನ್ನಲಾಗಿದೆ.

ಇಷ್ಟು ಸಮೀಪದಲ್ಲೇ ಯಂತ್ರೋಪಕರಣಗಳನ್ನು ಬಳಸಿ ನೂರಾರು ವರ್ಷಗಳಷ್ಟು ಹಳೆಯ ಮರಗಳನ್ನು ಕಡಿದು ಸಾಗಿಸಲು ಯತ್ನಿಸುತ್ತಿದ್ದರೂ ಅರಣ್ಯ ಸಿಬ್ಬಂದಿಗೆ ಮಾಹಿತಿ ಇರಲಿಲ್ಲವೇ? ಅಥವಾ ಮಾಹಿತಿ ಇದ್ದೂ ಕ್ರಮ ಕೈಗೊಳ್ಳಲಿಲ್ಲವೇ? ಎಂಬ ಪ್ರಶ್ನೆಗಳನ್ನು ಸ್ಥಳೀಯರು ಎತ್ತಿದ್ದಾರೆ.

ಅರಣ್ಯ ರಕ್ಷಣೆಗೆ ನಿಯೋಜಿಸಲಾದ ಶಿಬಿರದ ಸಮೀಪದಲ್ಲೇ ಹಾಡಹಗಲೇ ಇಂತಹ ಘಟನೆ ನಡೆದಿದ್ದರೆ, ಅರಣ್ಯದ ದೂರದ ಪ್ರದೇಶಗಳಲ್ಲಿ ನಡೆಯುತ್ತಿರುವ ಅಕ್ರಮ ಮರಕಡಿತದ ಪರಿಸ್ಥಿತಿ ಹೇಗಿರಬಹುದು? ಎಂಬ ಆತಂಕವೂ ವ್ಯಕ್ತವಾಗಿದೆ.

ಜಿಲ್ಲಾದ್ಯಂತ ಇದೇ ಪರಿಸ್ಥಿತಿ?
ಮುನಿಯಾಲು ಪ್ರಕರಣ ಒಂದೇ ಘಟನೆ ಅಲ್ಲ. ಉಡುಪಿ ಜಿಲ್ಲೆಯ ವಿವಿಧ ತಾಲೂಕುಗಳ ಅರಣ್ಯ ಭೂಮಿ ಹಾಗೂ ಮೀಸಲು ಅರಣ್ಯಗಳಲ್ಲಿ ಅಮೂಲ್ಯ ಮರಗಳ ಅಕ್ರಮ ಕಡಿತ ಮತ್ತು ಸಾಗಾಟ ನಿರಂತರವಾಗಿ ನಡೆಯುತ್ತಿದೆ ಎಂದು ಸಾಮಾಜಿಕ ಹೋರಾಟಗಾರರು ಆರೋಪಿಸಿದ್ದಾರೆ.

ಅರಣ್ಯ ಸಂಪತ್ತಿನ ರಕ್ಷಣೆಯಲ್ಲಿ ಅಧಿಕಾರಿಗಳು ವಿಫಲರಾದರೆ, ಇದೇ ಪರಿಸ್ಥಿತಿ ಮುಂದುವರಿದರೆ ಮುಂದಿನ ಕೆಲವೇ ವರ್ಷಗಳಲ್ಲಿ ಜಿಲ್ಲೆಯ ಕಾಡು, ಮರಗಳು, ಬೆಟ್ಟ-ಗುಡ್ಡಗಳ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ.

ಸಮಗ್ರ ತನಿಖೆಗೆ ಆಗ್ರಹ
ಮುನಿಯಾಲು–ಮುಟ್ಲುಪಾಡಿ ಪ್ರಕರಣ ಸೇರಿದಂತೆ ಜಿಲ್ಲಾದ್ಯಂತ ನಡೆದಿರುವ ಅಕ್ರಮ ಮರಕಡಿತ ಪ್ರಕರಣಗಳ ಕುರಿತು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ಸಮಗ್ರ ತನಿಖೆ ನಡೆಸಬೇಕು, ಕಡಿದ ಮರಗಳ ಸಂಖ್ಯೆ, ಮರಗಳ ಜಾತಿ, ಮೌಲ್ಯ, ಸಾಗಾಟಕ್ಕೆ ಬಳಸಿದ ವಾಹನಗಳು ಹಾಗೂ ಅನುಮತಿ ಪತ್ರಗಳ ಬಗ್ಗೆ ಪರಿಶೀಲನೆ ನಡೆಸಬೇಕು ಎಂದು ಹೋರಾಟಗಾರರು ಆಗ್ರಹಿಸಿದ್ದಾರೆ.

ಅರಣ್ಯ ಇಲಾಖೆಯ ಸಿಬ್ಬಂದಿಯ ನಿರ್ಲಕ್ಷ್ಯ ಅಥವಾ ಯಾವುದೇ ಅಧಿಕಾರಿಗಳ ಒಳಒಪ್ಪಂದ ಸಾಬೀತಾದಲ್ಲಿ, ಸಂಬಂಧಪಟ್ಟವರ ವಿರುದ್ಧ ಕಾನೂನುಬದ್ಧ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯವೂ ಕೇಳಿಬಂದಿದೆ.
“ಅರಣ್ಯ ಉಳಿದರೆ ಮಾತ್ರ ಮುಂದಿನ ಪೀಳಿಗೆ ಉಳಿಯುತ್ತದೆ. ಅರಣ್ಯ ಸಂಪತ್ತಿನ ಕಳ್ಳತನವನ್ನು ತಡೆಯುವುದು ಸರ್ಕಾರ ಮತ್ತು ಅರಣ್ಯ ಇಲಾಖೆಯ ಜವಾಬ್ದಾರಿ.

ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸತ್ಯವನ್ನು ಸಾರ್ವಜನಿಕರ ಮುಂದೆ ತರಬೇಕು” ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

Related posts

ನೀಟ್ ಫಲಿತಾಂಶ ಪ್ರಕಟ: ಉಡುಪಿ ಜಿಲ್ಲೆಯಲ್ಲಿ ನಕಲಿ ಅಂಕಪಟ್ಟಿ ಜಾಲ ಶಂಕೆ.

Swabhimana News Desk

ಫ್ಲೈಓವರ್‌ನಿಂದ ಸರ್ವಿಸ್ ರಸ್ತೆಗೆ ಬಿದ್ದ ಕಾರು ದಂಪತಿ ಸಾವು; ಪುತ್ರ ಪ್ರಾಣಾಪಾಯದಿಂದ ಪಾರು

Swabhimana News Desk

ಉಡುಪಿಯ ಬನ್ನಂಜೆ ಡಿವೈಡರ್ ಧ್ವಂಸ ಪ್ರಕರಣ,ಮಾಹಿತಿ ಹಕ್ಕು ಮತ್ತು ಸಾಮಾಜಿಕ ಹೋರಾಟ ಸಮಿತಿ ಯಿಂದ ಜಿಲ್ಲಾಧಿಕಾರಿಗಳಿಗೆ ದೂರು.

Leave a Comment