ಏಪ್ರಿಲ್ -23-2024 swabhimananews
ಚಿತ್ರದುರ್ಗ: ಎಸ್ಸಿ, ಎಸ್ಟಿಗೆ ವಿಶೇಷ ಅನುದಾನವನ್ನು ನೀಡುತ್ತೇವೆ. ಇಡೀ ದೇಶದಲ್ಲಿ ಜಾತಿ ಗಣತಿಯನ್ನ ಜಾರಿ ಮಾಡುತ್ತೇವೆ ಎಂದು ಕಾಂಗ್ರೆಸ್ ನಾಯಕಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ. ನಗರದ ಹಳೇ ಮಾಧ್ಯಮಿಕ ಶಾಲಾ ಮೈದಾನದಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಅವರು, ಕಾಡುಗೊಲ್ಲ ಸಮಾಜವನ್ನು ಎಸ್ಟಿಗೆ ಸೇರಿಸಲಾಗುತ್ತದೆ. ರೈತರಿಗೆ ಬೆಂಬಲ ಬೆಲೆ, ಕೃಷಿಗೆ GST ಮುಕ್ತಗೊಳಿಸ್ತೇವೆ. ಭೂಮಿ ಇಲ್ಲದವರಿಗೆ ಭೂಮಿ ನೀಡುತ್ತೇವೆ. ಬೆಳೆ ನಷ್ಟವಾದವರಿಗೆ 30 ದಿನದಲ್ಲಿ ವಿಮೆ ಹಣ ಕೊಡುತ್ತೇವೆ. ದೇಶದ ಸಂವಿಧಾನ, ರೈತರ ಉಳುವಿಗೆ ಕಾಂಗ್ರೆಸ್ ಬೆಂಬಲಿಸಿ ಎಂದು ಹೇಳಿದ್ದಾರೆ.
ಈಗ ದೇಶದ ದೊಡ್ಡ ನಾಯಕ ಸತ್ಯದ ದಾರಿಯಲ್ಲಿ ನಡೆಯುತ್ತಿಲ್ಲ. ವೈಭೋಗ ತೋರಿಸಿ ಓಡಾಡುತ್ತಿದ್ದಾರೆ, ಅಹಂ ತೋರುತ್ತಿದ್ದಾರೆ. ಸತ್ಯದ ಹಾದಿಯಲ್ಲಿ ನಡೆಯೋದು ಹಿಂದೂ ಧರ್ಮದ ಪರಂಪರೆ. ಶ್ರೀರಾಮ, ಗಾಂಧೀಜಿ, ಇತರೆ ಪ್ರಧಾನಿಗಳು ಸೇವಾಭಾವದಿಂದ ನಡೆದರು. ಈಗ ಮೋದಿ ಸರ್ಕಾರದಲ್ಲಿ ಕೇವಲ ಸುಳ್ಳಿನ ಕಂತೆಯೇ ಇದೆ ಎಂದು ಕಿಡಿಕಾರಿದ್ದಾರೆ.
ತಪ್ಪು ದಾರಿಯಲ್ಲಿ ವಿವಿಧ ರಾಜ್ಯಗಳಲ್ಲಿ ಸರ್ಕಾರಗಳನ್ನು ಬೀಳಿಸುತ್ತಾರೆ. ನೂರಾರು ಕೋಟಿ ರೂ. ಹಣ ನೀಡಿ ಶಾಸಕರನ್ನು ಖರೀದಿ ಮಾಡುತ್ತಾರೆ. ಚುನಾವಣೆ ವೇಳೆ ಅಭಿವೃದ್ಧಿ ವಿಚಾರ ಬಿಟ್ಟು ಜನರ ಭಾವನೆ ಕೆರಳಿಸುತ್ತಾರೆ.
ಕೇಂದ್ರದ ವಿರುದ್ಧ ‘ಕೈ’ ನಾಯಕಿ ಪ್ರಿಯಾಂಕಾ ಗಾಂಧಿ ಕಿಡಿ: ಅನೇಕ ಸಲ ಕರ್ನಾಟಕ ಸರ್ಕಾರ ಅನುದಾನವನ್ನ ಕೇಳಿದೆ. ಕೇಂದ್ರದಿಂದ ಈವರೆಗೂ ಒಂದು ಪೈಸೆ ಬಿಡುಗಡೆ ಆಗಿಲ್ಲ. ರಾಯಚೂರು ನಗರದಲ್ಲಿ ಏಮ್ಸ್ ನಿರ್ಮಾಣದ ಕನಸಿದೆ. ಆದರೆ ಈವಗೂ ಆ ಕನಸು ನನಸಾಗಿಲ್ಲ. ಕಳಸಾ ಬಂಡೂರಿ ಯೋಜನೆ ಈವರೆಗೂ ಮಂಜೂರಾಗಿಲ್ಲ. ಭದ್ರಾ ಯೋಜನೆಗೆ ಕೇಂದ್ರ ಸರ್ಕಾರ ಹಣ ಕೊಡಲಿಲ್ಲ. ರಾಜ್ಯದ ತೆರಿಗೆ ಹಣ ಸಹ ನೀಡದೆ ನಷ್ಟವನ್ನ ಮಾಡಿದ್ದಾರೆ ಎಂದಿದ್ದಾರೆ.
ರಾಜ್ಯ ಕಾಂಗ್ರೆಸ್ ಸರ್ಕಾರ ಪಂಚ ಗ್ಯಾರಂಟಿ ಜಾರಿಗೊಳಿಸಿದೆ. ನಿಮ್ಮ ಜೀವನದ ಮೇಲೆ ಪರಿಣಾಮ ಬೀರಿದೆ ಅಲ್ಲವೇ. ಗೃಹಲಕ್ಷ್ಮೀ ಯೋಜನೆಯಿಂದ ಪ್ರತಿ ಮಹಿಳೆಗೆ 2 ಸಾವಿರ ರೂ. ಹಣ, ಉಚಿತ ವಿದ್ಯುತ್, ಅನ್ನಭಾಗ್ಯ, ಶಕ್ತಿ ಯೋಜನೆಯಿಂದ ಉಚಿತ ಪ್ರಯಾಣ, ಯುವನಿಧಿ ಯೋಜನೆ ಜಾರಿ ಮಾಡಲಾಗಿದೆ. ಇನ್ನು ಕೇಂದ್ರದಲ್ಲಿ ನಮ್ಮ ಸರ್ಕಾರ ಬಂದರೆ ಪ್ರತಿ ಕುಟುಂಬದ ಮಹಿಳೆಗೆ 1 ಲಕ್ಷ ರೂ. ಸೇರಿ ಹಲವು ಗ್ಯಾರಂಟಿ ಯೋಜನೆಗಳ ಭರವಸೆ ನೀಡಿದ್ದು, ಇದು ಕೇವಲ ಆರಂಭ ಎಂದು ಹೇಳಿದ್ದಾರೆ.
ಕಳೆದ 45 ವರ್ಷದಲ್ಲಿ ಇಲ್ಲದ ನಿರುದ್ಯೋಗ ಈಗ ಸೃಷ್ಟಿಯಾಗಿದೆ. 75 ಕೋಟಿ ನಿರುದ್ಯೋಗಿಗಳು, ಕೇಂದ್ರದಲ್ಲಿ 30 ಕೋಟಿ ಕೆಲಸ ಖಾಲಿ ಇವೆ. ವರ್ಷಕ್ಕೆ ಎರಡು ಕೋಟಿ ಕೆಲಸ, ರೈತರ ಆದಾಯ ದುಪ್ಪಟ್ಟು ಭರವಸೆ ಹುಸಿ ಆಗಿದೆ. ಬೆಲೆ ಏರಿಕೆ ಎಂಬುದು ದೊಡ್ಡ ಸಮಸ್ಯೆ ಸೃಷ್ಠಿಸಿದೆ. ದುಡಿಮೆ ಮತ್ತು ಖರ್ಚು ತುಂಬಾ ದೊಡ್ಡ ಸಮಸ್ಯೆ ಆಗಿದೆ. ಪೆಟ್ರೋಲ್ 100 ರೂ, ಡೀಸೆಲ್ 90 ರೂ. ದಾಟಿದೆ. ಚಿನ್ನ, ಬೆಳ್ಳಿ ದುಬಾರಿ ಆಗಿದೆ ಎಂದು ಕಿಡಿಕಾರಿದ್ದಾರೆ.
Swabhimananews